Monday, 16 April 2012

ವೋಲ್ವೋ ಬಸ್ಸು


ಪೋಂ ಪೋಂ ಪೇಂ ಪೇಂ
ಬಂದೇ ಬಿಟ್ಟಿತು ನಮ್ಮೂರಿಗೆ ವೋಲ್ವೋ
ಅದನ್ನು ನೋಡಲು ಹತ್ತಲು ಮುದ್ದಾಡಲು ಅದೇನು ಜನರ ಗುಲ್ಲೋ

ಕೆಂಪು ಬಿಳಿ ಹಸಿರು ತ್ರಿವರ್ಣ ಧ್ವಜದಂತೆ ಕಲರ್
ಅದನ್ನು ಮದಗಜದಂತೆ ನಡೆಸುವ ಸದಾ ಸಮವಸ್ತ್ರ ಧರಿಸಿದ ಕಂಡಕ್ಟರ್ ಡ್ರೈವರ್

ಅದರಲ್ಲಿ ಕುಳಿತು ಬೇರೆಯವರನ್ನ ಪರಮಾರ್ಶಿಸುವುದೇ ಒಂದು ಚೆಂದ
ಏಕೆಂದರೆ ಕೆಲವರಿಗೆ ಅದರ ಹಮ್ಮು ಬಿಮ್ಮು ನೋಡುವುದೇ ಜೀವನದಲ್ಲಿ ಪರಮಾನಂದ

ಕೆಲವರಂತೂ ಅದರ ನಡೆಯಲ್ಲಿಗೆ ಎಂದು ಕೇಳದೆ ಹತ್ತುತ್ತಾರೆ
ಟಿಕೇಟ್ ಕಲೆಕ್ಟರ್ ಬಂದಾಗ ಅವನನ್ನು ಗುರಿ ಸರಿ ಹೇಳಲಿಲ್ಲ ಎಂದು ಬೈಯುತ್ತಾರೆ

ಇನ್ನು ಕೆಲವರು ಇಲ್ಲಿಂದ ಅಲ್ಲಿಗೆ ಹೋಗಲು ಐವತ್ತು ರೂಪಾಯಿಯಾ ಎಂದು ಮೂಗು ಮುರಿಯುತ್ತಾರೆ
ಜೊತೆಗೆ ಕರೆದುಕೊಂಡು ಬಂದವರ ಪಕ್ಕೆಗೆ ’ಅಯ್ಯೋ ದರಿದ್ರದವನೇ’ ಎಂದು ತಿವಿಯುತ್ತಾರೆ

ಇಲ್ಲಿ ಕುಳಿತವರಿಗಂತೂ ಪಕ್ಕದಲ್ಲಿರುವ ಹಳೇ ಗಾಡಿ, ಕಪ್ಪು ಬೋರ್ಡ್, ಕೆಂಪು ಬೋರ್ಡ್ ನೋಡಿ ಖುಷಿ
ಗರ್ದಿ ಗಮತ್ತಿನಲ್ಲಿ ಒಂಥರಾ ’ಲುಕ್’ ಕೊಡುವ ನಮ್ಮನ್ನು ನೋಡಿ ಹೊರಗಿನವರಿಗೆ ಹೊಟ್ಟೆಯುರಿ

ಅಲ್ಲೊಬ್ಬ ಠೊಣಪ ಯಾರೊಂದಿಗೋ ವ್ಯವಹಾರ ಮಾಡುತ್ತಿದ್ದಾನೆ
ಇಲ್ಲೊಂದು ಮಗು ತನ್ನ ಮುಗ್ಧತೆಯಿಂದ ಬಸ್ಸೆಲ್ಲಾ ವಾಸನೆ ಹರಡುತಿದೆ

ಹೈಹೀಲ್ಡ್ ಹಾಕಿದ ಸುಂದರಿಯರು ಬಂದೇ ಬಿಟ್ಟರು ತಮ್ಮ ಹಂಸ ನಡುಗೆಯಲ್ಲಿ
ಜೊಲ್ಲು ಸುರಿಸುತ್ತ ಬೆಕ್ಕಸ ಬೆರಗಾಗಿ ನೋಡುತ ಕುಳಿತರು ತರುಣರು ಪ್ರೇಮಸಲ್ಲಾಪದ ಆಸೆಯಲ್ಲಿ

ಬೆಳಗಿನಿಂದ ರಾತ್ರಿಯವರಗೆ ಸಾಫ್ಟ್ವೇರ್ ಕಂಪೆನಿಯಂತೆ ಕೆಲಸ ಮಾಡುವ ಈ ಬಸ್
ಕರಿಯ ಬಿಳಿಯ ಬೇಧ ಭಾವ ನೋಡದೆ ಊರೆಲ್ಲ ತಿರುಗುವುದ ನೊಡಿ ದಿಲ್ ಖುಷ್

                    -ಶಿಲ್ಪ ಶಾಸ್ತ್ರಿ




ಉಬ್ಬು ತಗ್ಗು


ಓ! ನಮ್ಮೂರ ರಸ್ತೆ
ನಿನಗೇಕೆ ಈ ಅವಸ್ಥೆ

ಓಂದು ಕಾಲದಲ್ಲಿ ನೀ ತಳುಕು ಬಳುಕಿನ ಸುಂದರಿ
ಈಗ ಎಲ್ಲೆಂದರಲ್ಲಿ ನೋಡು ಚರಂಡಿ ಮೋರಿ

ನಮ್ಮಲ್ಲಿ ಪ್ರೊಆಕ್ಟಿವ್ ಥಿಕಿಂಗ್ ಇಲ್ಲ ನೋಡು
ಅದಕ್ಕೆ ಎಲ್ಲೆಂದರಲ್ಲಿ ಒನ್ ವೇ, ಟೇಕ್ ಡೈವಶ್ರನ್, ರೋಡ್ ಕ್ಲೋಸ್ಡ್ ಎಂಬ ಬೋರ್ಡ್

ಅಲ್ಲೆಲ್ಲೋ ನಮ್ಮನ್ನು ಆಳುವವರು ಬಂದರು
ಕತ್ತರಿ, ತುರಾಯಿ, ಕಾಯಿ ಒಡೆಸಿ ಕೆಲಸ ಮುಂದುವರೆಸಿ ಅಂದರು

ಫ್ಲೈ ಒವರ್, ಎಕ್ಸ್ಪ್ರೆಸ್ ವೇ, ಚತುಷ್ಪಥ ಯೋಜನೆ
ಅಯ್ಯೋ! ಇಂದೂ ತಡವಾಗಿ ಮನೆ ಸೇರಬೇಕಲ್ಲ ಎಂದು ಜನರ ಚಿಂತನೆ

ಅದ್ಯಾವಗ ನಿನಗೆ ಕಾಯಕಲ್ಪವೋ
ಅದ್ಯಾವಗ ನಮ್ಮ ನಿಟ್ಟುಸಿರಿನ ಹಿಡಿತವೊ

ಎಲ್ಲಾದಕ್ಕೂ ಅಡ್ಜಸ್ಟ್ ಆಗುವವರು ನಾವು
ನಿಂತಲ್ಲೇ ನಿಂತು ಮುಂದೆಂದೋ ನನ್ ಮೇಲೆ ಖುಶಿಯಲ್ಲಿ ಓಡಾಡುವೆಯಲ್ಲೋ ’ಭೂಫ’ ಎಂದೆನ್ನುತ್ತಿರುವ ನೀವು

                                -ಶಿಲ್ಪ ಶಾಸ್ತ್ರಿ

ರಾಜಠೀವಿ


ಸಂಡಾಸು ಮಾಡಲು ಕುಕ್ಕರು ಬಡಿದ ಡೊಂಗ್ರನಿಗೆ
ತಲೆಯೆಲ್ಲಾ ತುಂಬಿದ ಆಲೋಚನೆ
ಮೊನ್ನೆ ಮೊನ್ನೆ ಶಹರದಲ್ಲಿ ನೋಡಿದ ಅರಮನೆ
ದೇವೇಂದ್ರನಿರುವ ಸ್ವರ್ಗಕ್ಕೇನು ಕಮ್ಮಿ ಇಲ್ಲ

ಅಮ್ಮನ ಕೈಯ ಒಣರೊಟ್ಟಿ ತಂಗಿಯ ರಚ್ಚೆ ಹಿಡಿದ ಅಳು
ಸುತ್ತ ಸದಾ ಸಿಂಬಳ ಸುರಿಸುತ್ತ ಚಡ್ಡಿ ಮೇಲೆರಿಸುತ್ತ ಓಡಾಡುವ ಚಿಣ್ಣರು
ಅಂದು ಟೊಂಕ್ಯನಿಗೆ ಕಸಹೆಕ್ಕುವಾಗ ಸಿಕ್ಕಿದ ಬಾರ್ಬಿ ಡಾರ್ಲಿಂಗ್
ಅನೇಕರ ಕಣ್ಣಿಗೆ ಕೈಗೆ ಸಿಗದ ಹುಳಿ ದ್ರಾಕ್ಷಿಯಾಗಿದ್ದಳು

ಒಮ್ಮೆ ತಿರುಗಿ ತನ್ನ ಜೋಪಡಿಯಡೆ ನೋಡಿದ ಕಣ್ಣು ಕೀರಲಿಸಿಕೊಂಡು
ಅದೂ ವೈಟ್ ಹೌಸಿನಂತೆ ಕಂಡಿತು ಕಣ್ಣಿಗೆ
ಮರದ ಗೊಂಬೆಯೊಂದು ಕೀರಲು ಸದ್ದು ಮಾಡದೆ ಮುರಿದು ನಿಂತಿದೆ
ಹಾಳಾಗಿ ಎಸೆದ ಅರಮನೆ ಆಟದ ಸೆಟ್ಟು, ತನ್ನನ್ನೇ ರಾಜನಂತೆ ಕಲ್ಪಿಸಿಕೊಂಡ

ಬಹೀರ್ದೆಶೆ ಮುಗಿಸಿ ಯಾಂತ್ರಿಕವಾಗಿ ಕುಳಿತ ಮುರಿದ ಮದುವೆ ಕುರ್ಚಿಯ ಮೇಲೆ
ಅನಿಸುತ್ತಿತ್ತು ತನ್ನ ಸ್ವಯಂವರ ನಡೆಯುತಿದೆ ಸುತ್ತಲೂ ಚಾಮರ ಸೇವೆ
ಕುಂಟ ನಾಯಿಯೊಂದು ಕುಳಿತ್ತಿತ್ತು ಭಕ್ತಿಭಾವದಲ್ಲಿ ಒಡೆಯನ ಎದುರು
ತನ್ನ ವಾಹನವದೆಂದು ತಾನು ಈ ಭೂಮಿಯ ಅಧಿಪತಿಯೆಂಬಂತೆ ಭಾಸವಾಯಿತು

ತನ್ನ ಕಾಲನೆತ್ತಿ ಮೂತ್ರವೆಸೆದು ಸುತ್ತ ಪರಿಧಿಯನ್ನು ರಚಿಸುತ್ತಿದ್ದ ನಾಯನ್ನು ಕಂಡು
ತನ್ನ ರಾಜ್ಯ ಇನ್ನಷ್ಟು ಬಲವಾಗುತ್ತಿದೆಯಂಬ ಧೈರ್ಯ ಮನದಲ್ಲಿ
ನೂರಾರು ಆಳುಗಳು ತನ್ನ ಸುತ್ತಮುತ್ತ ರಕ್ಷಣೆಗೆ
ತಾನೇ ದೊಡ್ಡ ಪರಾಕ್ರಮಿಯೆಂದು ತಿಳಿದು ಇಲಿ ಹೆಗ್ಗಣಗಳ ಕಡೆ ನೋಡಿದ

ಅನಾರಕಲಿಯೊಂದು ಕಮ್ಮಿ ಅದಕ್ಕೇನಂತೆ ಪಕ್ಕದ ಬೀದಿಯ ಕುಮ್ಮಿಯನ್ನು
ಕೇಳೆ ಬಿಡುವೆನು ತನ್ನ ರಾಣಿಯಾಗೆಂದು
"ಸುಬಹ್ ಸೇ ಕಹಾಂ ಪೆ ಹೈ ಬೇ ತೂ"
ಎಂದು ಮಗನ ಕಂಡ ಖುಷಿಯಲ್ಲಿ ಅಮ್ಮ ಬೆನ್ನಮೇಲೆ ರಪರಪ ಬಾರಿಸಿದಳು

                    -ಶಿಲ್ಪ ಶಾಸ್ತ್ರಿ


ಪರದಾ!


ಪರದೆಯ ಹಿಂದಿನ ಷೋಡಷ ಪ್ರೌಢಿಮೆ
ದೇವರು ಕೂಲಂಕುಷವಾಗಿ ಕೆತ್ತಿದ ಶಿಲ್ಪ
’ಈದ್ ಕಾ ಚಾಂದ್’ ತರಹ ಆಗಾಗ ಕಾಣುವ ಕಣ್ಣು
ಚುಂಬಕಶಕ್ತಿಯದಕ್ಕೆ ಬರೇ ಹಡೆಯುವ ಯಂತ್ರವಲ್ಲ

ಹೂ ಬನದ ನಡುವೆ ಹಾರಾಡುವ ಹಸಿರು ಚಿಟ್ಟೆ ರೂಪುಗೊಂಡಿದ್ದೆ ಕಂಬಳಿಹುಳದಿಂದ
ನೀಲಾಂಜನ ಪ್ರಕಾಶಿಸುವುದೇ ಹೊತ್ತಿದ ಬೆಂಕಿಕಡ್ಡಿಯಿಂದ
ನೂರೆಂಟು ದಿಕ್ಕುಗಳಲ್ಲಿ ತನ್ನ ಪ್ರಸ್ತುತಿಪಡಿಸುವಾಸೆ
ತಾನೊಬ್ಬ ಪ್ರಬುದ್ಧೆ ಎದೆಯತ್ತಿ ನಿಲ್ಲಬಲ್ಲೆ ಸಮಕಾಲೀನರ ನಡುವೆ

ಧರ್ಮ ಅಧರ್ಮಗಳ ಕಣ್ಣುಕಟ್ಟು ಗಾಂಧಾರಿಯಗಿದೆ ಈ ಜಗ
ಓ ಅಲ್ಲಾಹ್! ಬೇಗ ನನ್ನೀ ಬಂಧನದಿಂದ ಮುಕ್ತಿಪಡಿಸು ಎನ್ನುತಿದೆ ಮನ
ಮೈತುಂಬ ಸುತ್ತಿರುವ ಸಂಕೋಲೆಗಳನ್ನು ಕಿತ್ತೆಸೆದು
ಪ್ರಪಂಚವಿಡೀ ಸ್ವತಂತ್ರಹಕ್ಕಿಯಂತೆ ಹಾರಾಡುವಾಸೆ

                    -ಶಿಲ್ಪ ಶಾಸ್ತ್ರಿ

ನಿವೇದನೆ


ಗುರುದಕ್ಷಿಣೆ ನೀಡಲು ಹಾರಿತು ನದಿಯ ಬುಡಕ್ಕೆ ಗುಬ್ಬಿ
ಎತ್ತ ನೋಡಲ್ಲಿ ಬರೇ ಮಣ್ಣು ಕಲ್ಲು ನೆಲ
ಹಿಂದೊಮ್ಮೆ ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತಿದ್ದ ನದಿ
ಈಗ ಎಲ್ಲೆಂದರಲ್ಲಿ ಕಾಂಗ್ರೆಸ್ಸ್ ಕಳ್ಳಿಯಂತೆ ಹಬ್ಬಿದ ಕಟ್ಟಡಗಳು ಮುಟ್ಟುತ್ತಿವೆ ಮುಗಿಲ

ಆಗಿದೆ ವಾತವರಣದಲ್ಲಿ ಏರುಪೇರು
ಹರಿದಿದೆ ಓಝೋನ್ ಪದರು ಚೂರುಚೂರು
ಅಯ್ಯೋ ದೇವರೆ! ಇದೆಂತ ದುರ್ಗತಿ ಎಂದು ಕಣ್ಣು ಕೆಂಪಾಯಿತು
ತನ್ನ ಅಣ್ಣ ತಮ್ಮಂದಿರನ್ನ ಬೇರ್ಪಡಿಸಿದರಲ್ಲ ಈ ರಾಕ್ಷಸರು ಎಂದು ಹಿಡಿಶಾಪ ಹಾಕಿತು

ಮೆಲುಕು ಹಾಕಿತು, ಸೀಟಿ ಹೊಡೆಯುತ್ತ ಆಟವಾಡುತ್ತಿದ್ದ ದಿನವನ್ನ
ಕೇಳುತ್ತ ನದಿಯ ಜುಳುಜುಳು ಮಂಜುಳ ನಾದ
ಪ್ರಶ್ನೆ ಎದ್ದಿತು ಗುಬ್ಬಿಯ ಮನದಲ್ಲಿ
ಮೂಳೆ ಮಾಂಸದ ತೊಡಿಕೆಯ ಮಾನವನೇಕೆ ದಾನವನಾದ

ಬರಡು ಭೂಮಿ ಬಂಜೆತನದ ಕುರುಹು
ನದಿ ನೀರಾಗಿದೆ ರಕುತದಂತೆ ಕೆಂಪು
ಮದ ಮತ್ಸರ ಕೊಲೆ ಸುಲಿಗೆ ದರೋಡೆ
ಮರೆತಾಗಿದೆ ಗೋಧೂಳಿಯ ಕಂಪು

ಗುಬ್ಬಿ ಮೇಲೆಕೆ ಬ್ರಹ್ಮಾಸ್ತ್ರ
ಬನ್ನಿ ಆತ್ಮಾನ್ವೇಷಣೆ ಮಾಡೋಣ
ಶುದ್ಧ ಪರಿಸರ, ಆರೋಗ್ಯಭರಿತ ಜೀವನ
ಸಮಯ ಪ್ರಜ್ನೆಯಿಂದ ನಲ್ಮೆಯ ಬಾಳುವೆ ನಡೆಸೋಣ

                    -ಶಿಲ್ಪ ಶಾಸ್ತ್ರಿ


ಮುಂಗಾರು ಮಳೆ


ಮಲೆನಾಡ ಮಳೆ ಚೆಂದ ಮದುವಣಗಿತ್ತಿಯ ನಗು ಚೆಂದ
ಕಣ್ಣುಮುಚ್ಚಿ ಸುರಿಯುವ ಮುಂಗಾರು ಹಿಂಗಾರು ಸೋನೆ
ತೆಂಗಿನ ಗರಿಯ ಚಪ್ಪರ ಗೋಡೆ ತುಂಬ ಮಣ್ಣೆರಚಿ ಸಿಂಗಾರವಾಗಬಾರದೆಂದು
ಮೊದಲ ಮಳೆಯ ಮಣ್ಣ ಕಂಪು, ಕೋಗಿಲೆಯ ಕುಹೂ ತೋಟವಿಡಿ ಜೀರುಂಡೆ ಸದ್ದು

ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳ ಬರೋಬ್ಬರಿ ತಯಾರಿ
ತೆಂಗು ಕಂಗುಗಳ ಪಿಂಗಾರ ಮಳೆಗಾಲ ಸ್ವಾಗತಿಸುವ ರೀತಿ
ಭೂರಮೆಯು ನಳನಳಿಸುತಿದೆ ಹಸಿರು ಬಾಸಿಂಗ ತೊಟ್ಟು
ಕಾಲು ಸೇತುವೆ ನೀರಿನ ತೋಡು ನಯನ ಮನೋಹರ ದೃಶ್ಯ

ಕಂಬಳಿ ಸ್ಕಾರ್ಫ್ ಸ್ವೆಟರ್ ಪೆಟ್ಟಿಗೆಯಿಂದ ಹೊರಬಂತು
ಅಜ್ಜನ ಗಾಂಭೀರ್ಯ ಕವಳ ಕುಟ್ಟುತ ಹೊರಗಡೆ ಒಣ ಹಾಕಿದ ಅಡಿಕೆ ಕೊಬ್ಬರಿಯಡೆಗೆ
ಜಾಯಿಕಾಯಿ ಬಾಳೆಕಾಯಿ ಜಾಂಬ್ಳೆ ಮುರುಗಲ ಹಣ್ಣಿನ ಶೇಖರಣೆ
ಹುಳಿಸೊಪ್ಪು, ಮುಗಿದು ಹೋದ ಹಲಸಿನಕಾಯಿ ಚಿಪ್ಸಿನ ಡಬ್ಬದಿಂದ ಏನಾದರು ಹೊರಬರಬಹುದೆಂಬ ಕಾತರ

ಮಣ್ಣುಹುಳು ಏಳುತ್ತಿವೆ ಆಕ್ರಮಿಸಲು ದೀವಾರವನ್ನು
ತೆಂಗಿನ ಕತ್ತದ ಮಂಚ ಲಾಟೀನ್ ಬೆಳಕಿನ ಲಾವಂಚ
ಮಿಣುಕು ಹುಳ ಸೇರಿಕೊಂಡಿತು ಚಾದರದೊಳಗೆ
ಗುಡುಗು ಗುಮ್ಮನ ಬರುವಿಕೆಯಲ್ಲಿ ಕಾಯುತ್ತಿತ್ತು ಹೃದಯ

                    -ಶಿಲ್ಪ ಶಾಸ್ತ್ರಿ

ಕುರುಡು ಪ್ರೇಮ


’ಬೇಡ ಮಗ, ಬಿಟ್ಟಾಕು ಇದು ಇನ್ಫಾಚುಯೇಷನ್’ ಅಂದರು ಫ್ರೆಂಡ್ಸ್
ಮೂರ್ಖ ಅರಿಯಲೇ ಇಲ್ಲ ಅದರಿಂದಾಗುವ ನಷ್ಟ
ಇದು ಲವ್ ಸೈನ್ಸ್ ನನ್ನ ಅವಳ ಕೆಮಿಸ್ಟ್ರಿ ಸರಿ ಹೋಗುತ್ತದೆ ಎಂದು ಹಾಕಿದ ಗುಣಾಕಾರ ಭಾಗಕಾರ
ಹದಿಹರೆಯದ ಪ್ರೇಮ ಲೆಕ್ಕಕ್ಕಿಂತ ಕ್ಲಿಷ್ಟ

ಅವನು ಆ ಮೋಹನಾಂಗಿಯ ಬಲೆಗೆ ಬಿದ್ದ
ಚಂದ್ರವದನೆ, ತುಟಿ ದಾಳಿಂಬೆ, ಮದವೇರಿಸುವ ನಿತಂಬ
ಅವಳು ನಡೆದಾಡುವ ದಾರಿಯಲ್ಲೆಲ್ಲ ಇವ ಹೂ ಚೆಲ್ಲಿದ
ಕಣ್ಣಲ್ಲೇ ಇರಿಯುವ ನೋಟ, ರಾತ್ರಿಯಲ್ಲ ಅವಳ ಕನವರಿಕೆ

ದೇಶ ಕೋಶ ಲೆಕ್ಕಿಸದೆ ಅವಳನ್ನು ಓಡಾಡಿಸಿದ
ಹೋಟೆಲ್, ಶೊಪಿಂಗ್, ಸ್ನೂಕರ್, ಪಬ್ ಎಂದು ಹಣದ ಹೊಳೆ ಹರಿಸಿದ
ತನ್ನ ಪ್ರೀತಿ ಸಾವಿರಕ್ಕೊಂದು ಅಂದ
ರಕ್ತದಲ್ಲೇ ಪ್ರೇಮಪತ್ರ ಬರೆದ

ಅವಳು ವಿದೇಶಕ್ಕೆ ಹಾರಿದಳು ಪುರ್ರೆಂದು
ಹೈಯರ್ ಡಿಗ್ರಿ ಸಂಪಾದಿಸುವೆನೆಂದು
ಅವಳ ಲೈಫು ಅಲ್ಲೇ ಸೆಟ್ಲ್
ಇಲ್ಲಿ ಇವನಾದ ಸದಾ ಅವಳದೇ ನೆನಪಿನಲಿ ಮೆಂಟ್ಲ್

ಅದೇ ಮಧುರ ಯಾತನೆಯಲ್ಲಿ ಕೊರಗಿ ಕೊರಗಿ ’ಸುರ’ ದಾಸನಾದ
ಕುರುಚಲು ಗಡ್ಡ, ಎಣ್ಣೆ ಮುಖ ರಾತ್ರಿಯೆಲ್ಲ ಹಲುಬಿ ಹಲುಬಿ ಕಾಳಿದಾಸನಾದ
ಅಪ್ಪ ಅಮ್ಮನಿಗೆ ಬಿಸಿ ತುಪ್ಪ ತಿಂದ ಸ್ಥಿತಿ
ಪ್ರಾಯದ ಹುರುಪಿನಲ್ಲಿ ಮೈಮರೆತದ್ದರಿಂದ ಬಂದ ಅಧೋಗತಿ

ಕುರುಡು ಪ್ರೇಮ ಅವನೀಗ ಭಗ್ನ ಪ್ರೇಮಿ
ಅಂದುಕೊಂಡಿದ್ದವ ಒಂದೊಮ್ಮೆ ತಾನೊಬ್ಬ ಮಹಾನ್ ಅಮರಪ್ರೇಮಿ
ಹುಡುಗರೇ ಹುಷಾರ್! ಸದಾ ಎಚ್ಚರವಿಡಿ
ತುರ್ತು ನಿರ್ಗಮನದ ಕಡೆ ಸದಾ ಗಮನವಿಡಿ

                    -ಶಿಲ್ಪ ಶಾಸ್ತ್ರಿ