ನಿಶ್ವಿಕಾ ಒಮ್ಮೆ ಪ್ರಾಜೆಕ್ಟರ್ ಕಡೆ ದಿಟ್ಟಿಸಿ ನೋಡಿ ತನ್ನ ಪ್ರೆಸೆಂಟೇಷನ್ ಅದರ ಪರದೆ ಮೇಲೆ ಸ್ಪಷ್ಟವಾಗಿ ಮೂಡಿದ್ದನ್ನ ಖಾತ್ರಿ ಪಡಿಸಿಕೊಂಡಳು.
ತನ್ನ ದಪ್ಪ ಕಪ್ಪು ಫ್ರೇಮಿನ ಕನ್ನಡಕವನ್ನ ಸರಿಪಡಿಸಿಕೊಳ್ಳುತ್ತ ಆ ಕೋಣೆಯಲ್ಲಿ ಸಮಾಲೋಚನೆ ನಡೆಸಲು ಕರೆಸಿದ್ದ ತನ್ನ ಟೀಮ್ ಕಡೆ ತಿರುಗಿದಳು. ಮರುದಿನ ಅವಳ ಕಂಪನಿ ಇಪ್ಪತ್ತೈದು ಸೌಂದರ್ಯ ಉತ್ಪನ್ನಗಳನ್ನ ಆನ್ಲೈನ್ ಬಿಡುಗಡೆ ಮಾಡುವುದಕ್ಕೆ ತಯಾರಾಗಿತ್ತು. ಅದರ ಮೊದಲು ಈ ಮೀಟಿಂಗು ಅತ್ಯಂತ ಮಹತ್ವದ್ದಾಗಿತ್ತು.
ಅದಕ್ಕಾಗೇ ಬೆಳ್ಳಂಬೆಳ್ಳಗ್ಗಿನ ಒಂಭತ್ತು ಘಂಟೆಗೆ ಏಳೆಂಟು ಸದಸ್ಯರು ಅಲ್ಲಿ ಸೇರಿದ್ದರು. ಅದು ಅವಳ ಮೇಲಿನ ಭಯದಿಂದಲೋ ಅಥವಾ ಭಕ್ತಿಯಿಂದಲೋ ಗೊತ್ತಿಲ್ಲ.
ಇನ್ನೇನು ನಿಶ್ವಿಕಾ ತನ್ನ ಕೈಯಲ್ಲಿದ್ದ ವೈರ್ ಲೆಸ್ ಪ್ರೆಸೆಂಟರ್ ಅನ್ನು ಪರದೆ ಮೇಲೆ ಹಾಯಿಸಬೇಕನ್ನುವಷ್ಟರಲ್ಲಿ ಹೊರಗಿನ ಜಗುಲಿಯಲ್ಲಿ ಯಾರೋ ಜೋರು ಜೋರಾಗಿ ಮಾತಾಡಿದಂತೆ, ಯಾರನ್ನೋ ತಡೆದಂತೆ ಕೇಳಿಸಿತು. ನಿಶ್ವಿಕಾ ಗುಂಪಿನ ಅತ್ಯಂತ ಕಿರಿಯ ಉದ್ಯೋಗಿ ಕಡೆ ತಿರುಗಿ 'ಏನಾಗ್ತಿದೆ? ಹೋಗಿ ನೋಡಿ ಬಾ' ಎನ್ನುತ್ತಿದ್ದಂತೆ ಕೋಣೆಯ ಬಾಗಿಲು ದಢಾರನೆ ತೆರೆದುಕೊಂಡಿತು. ಅವಳು ತನ್ನ ಆಫೀಸಿನ ಹಿರಿಯ ಸೆಕ್ಯೂರಿಟಿ ಗಾರ್ಡ್ ಅನ್ನು 'ನನ್ನನ್ನು ಯಾರೂ ತಡಯಬೇಡಿ. ನಾನ್ಯಾರು ಗೊತ್ತಿಲ್ಲವೇ. ನಿಮಗೆಷ್ಟು ಧೈರ್ಯ ಕಿಶನ್ ಅವರೇ ನನ್ನನ್ನ ಮುಟ್ಟಲು' ಎಂದು ಹಿಂದಿಯಲ್ಲಿ ಜೋರಾಗಿ ದಬಾಯಿಸುತ್ತ ಕೋಣೆಯೊಳಗೆ ಒಳನೂಕಿಕೊಂಡು ಬರುತ್ತಿದ್ದ ವಶಿಷ್ಠನನ್ನು ಕಂಡು ಆಶ್ಚರ್ಯ ಚಕಿತಳಾದಳು.
ನಿಶ್ವಿಕಾ ಅವಳಿಗರಿವಿಲ್ಲದೆ 'ವಶೀ...' ಎಂದು ಉದ್ಘಾರ ಮಾಡುತ್ತಿದ್ದಂತೆ ಅವನು 'ನಾನು ನಿನ್ನ ಹತ್ತಿರ ಮಾತನಾಡಬೇಕು. ದಯವಿಟ್ಟು ಹೊರಗಡೆ ಬಾ' ಅಂದನು. ನಿಶ್ವಿಕಾ 'ಐ ಆಮ್ ಇನ್ ಮೀಟಿಂಗ್. ಕಿಶನ್ ಇವರನ್ನ ಹೊರಗಡೆ ಲೌಂಜ್ ಅಲ್ಲಿ ಕೂರಿಸಿ. ಒಂದು ತಾಸಿನಲ್ಲಿ ನಾನು ಬಂದು ಕಾಣುತ್ತೇನೆ' ಎನ್ನಲು ಸೆಕ್ಯೂರಿಟಿ ವಶಿಷ್ಠನನ್ನು ಹೊರಗಡೆ ಕರೆದೊಯ್ಯಲು ತಯಾರಾದನು. ಆಗ ವಶಿಷ್ಠ 'ನಿಂಗೊತ್ತಾ. ನಂದಿಲ್ಲಿ ಮುಗೀತು. ನಾನಿನ್ನಿಲ್ಲಿ ಇರುವುದಿಲ್ಲ. ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದೇನೆ. ನಂಗಿದೆಲ್ಲ ಏನೂ ಬೇಡ' ಎಂದು ದಗ್ದನಾಗಿ ನುಡಿಯುತ್ತಾ ಬಾಗಿಲೆಡೆ ತಿರುಗಿದನು.
ನಿಶ್ವಿಕಾಳಿಗೆ ಆ ಹವಾನಿಯಂತ್ರಿತ ಕೋಣೆಯಲ್ಲೂ ಉಸಿರು ಕಟ್ಟಿದಂತಾಯಿತು. ಬಾಯೆಲ್ಲ ಒಣಗಿದಂತಾಗಿ ಮೈಯೆಲ್ಲಾ ಬೆವರತೊಡಗಿತು. ಕೂಡಲೇ ಚೇತರಿಸಿಕೊಂಡು 'ಒಂದು ನಿಮಿಷ ನಿಲ್ಲು. ನಾವು ಮಾತನಾಡೋಣ' ಅನ್ನುತ್ತಾ ಟೀಮ್ ಕಡೆ ತಿರುಗಿ 'ಒಂದೆರಡು ತಾಸಿನ ನಂತರ ಮೀಟಿಂಗ್ ಗೆ ಬನ್ನಿ. ಅಲ್ಲಿಯವರೆಗೆ ನಿಮಗೆ ನಿಯೋಜಿಸಿದ ಕೆಲಸ ಮುಗಿಸಿ' ಅಂದಳು.
ಅವರೆಲ್ಲ ಹೊರಗೆ ಹೋಗುತ್ತಿದ್ದಂತೆ ವಶಿಷ್ಠನೆಡೆ ಕಣ್ಣು ಹಾಯಿಸಿ 'ಏನು ನಿನ್ನ ಗಲಾಟೆ. ಬೆಳಗ್ಗೆ ಬೆಳಗ್ಗೆ ಈ ತರಹ ನನ್ನ ಕೆಲಸಕ್ಕೆ ತೊಂದರೆ ಬರುವುದು ನನಗಿಷ್ಟವಿಲ್ಲ. ಅದೇನು ಒದರಬೇಕೋ ಹೇಳಿ ಜಾಗ ಖಾಲಿ ಮಾಡು' ಎಂದು ಗರಮ್ ಆದಳು. ಅವನು 'ಹೇಳುವುದೇನಿದೆ. ಎಲ್ಲಾ ಮುಗೀತು. ನಾನು ನನ್ನ ಸಂಸ್ಥೆ ಮಾರುತ್ತಿದ್ದೇನೆ' ಎಂದು ಹಗುರವಾಗಿ ನಕ್ಕನು.
ಅವಳು ಒಂದು ಕ್ಷಣ ತನ್ನ ಕಿವಿಯನ್ನು ತಾನೇ ನಂಬದಾದಳು. ಕಣ್ಣನ್ನು ಕಿರಿದು ಮಾಡುತ್ತಾ 'ಇದು ಜೋಕು ಮಾಡೋ ಟೈಮ್ ಅಲ್ಲ ಮಿಸ್ಟರ್ ವಶಿಷ್ಠ. ನಾವೆಲ್ಲ ನಾಳೆ ಬೆಳಗ್ಗೆಯಾದರೆ ಪ್ರಾಡಕ್ಟ್ಸ್ ಬಿಡುಗಡೆ ಮಾಡೋ ಗಡಿಬಿಡಿಯಲ್ಲಿದ್ದೇವೆ. ದಯವಿಟ್ಟು ನೀನಿನ್ನು ಹೊರಡು' ಅಂದಳು. ಅದಕ್ಕೆ ಅವನು ಕಿವಿಗೊಡದೆ 'ನಿಶಿ... ನೀನು ಮೀಡಿಯಾ ವರದಿ ನೋಡಲಿಲ್ವ. ಒಂದು ವಾರ ಆಯ್ತು ಸುದ್ದಿ ಬಂದು. ಎಷ್ಟು ಚೆನ್ನಾಗಿ ನನ್ನನ್ನು ಹೊಗಳಿ ಛಾಪಿಸಿದ್ದಾರೆ' ಎಂದು ಕಹಿಯಾದ ಧ್ವನಿಯಲ್ಲಿ ಹೇಳಿ 'ಒಂದು ಕಾಲದಲ್ಲಿ ರಾಜನಂತೆ ಮೆರೆಯುತ್ತಿದ್ದ ವಶಿಷ್ಠ ಶರ್ಮಾನ ಅಧಿಪತ್ಯದ ಅಂತ್ಯ. ಅಲೋಹಾ ಆಡ್ ಅಂಡ್ ಮಾರ್ಕೆಟಿಂಗ್ ಕೋ. ದಿವಾಳಿ ಮತ್ತು ಗ್ರಾಹಕರಿಗೆ ಪಂಗನಾಮ' ಎಂದು ಓದುತ್ತಾ 'ಆಹಾ! ಎಷ್ಟು ವರ್ಣನೆ ಮಾಡಿದ್ದಾರೆ ನೋಡು' ಎಂದು ತನ್ನ ಮೊಬೈಲನ್ನು ಅವಳ ಮುಖದೆದುರು ಹಿಡಿದನು.
ನಿಶ್ವಿಕಾಳಿಗೆ ಒಮ್ಮೆಲ್ಲೇ ತಲೆ ತಿರುಗಿದಂತೆ ಅನಿಸಿ ಪಕ್ಕದಲ್ಲಿದ್ದ ಸೋಫಾದ ಮೇಲೆ ದೊಪ್ಪೆಂದು ಕುಳಿತಳು. 'ಡೈರೆಕ್ಟರ್ ಕೋಣೆ ಚೆನ್ನಾಗಿ ಕಟ್ಟಿಸಿಕೊಂಡಿದ್ದೀಯ' ಎಂದು ಸುತ್ತಮುತ್ತ ತನ್ನ ಬೆರಗಿನ ಕಣ್ಣುಗಳಲ್ಲಿ ನೋಡುತ್ತಾ ವಶಿಷ್ಠ ತಾನೂ ಸೋಫಾದ ಇನ್ನೊಂದು ಅಂಚಿನಲ್ಲಿ ಕುಳಿತನು. ಅವಳು ಈ ಎರಡು ವರ್ಷಗಳಲ್ಲಿ ಅದೇ ಮೊದಲ ಬಾರಿಗೆ ಅನ್ನುವಂತೆ ತಾನೂ ಆ ಕೋಣೆಯನ್ನು ನೋಡಲಾರಂಭಿಸಿದಳು. ಅದೊಂದು ಅತ್ಯಂತ ವಿಶಾಲವಾದ ಸುಂದರವಾಗಿ ಅಲಂಕರಿಸಲ್ಲ್ಪಟ್ಟ ಕೋಣೆಯಾಗಿತ್ತು.
ಒಂದು ಕಡೆ ಗೋಡೆ ಪೂರ್ತಿ ಗಾಜಿನಿಂದ ಮಾಡಲ್ಪಟ್ಟಿತ್ತು. ಅದರೆದುರು ಅವಳ ಕೆಲಸದ ಮೇಜು ಖುರ್ಚಿಗಳಿದ್ದವು. ಸ್ವಲ್ಪ ದೂರದಲ್ಲೇ ಎದುರಿಗೆ ಎಂಟು ಹತ್ತು ಜನರು ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗುವ ತೇಗದ ಮರದ ದೊಡ್ಡದೊಂದು ಮೇಜಿತ್ತು. ಅಲ್ಲೇ ಎಲ್ಲಾ ಮಹತ್ವದ ಮೀಟಿಂಗ್ ನಡೆಯುತ್ತಿದ್ದವು. ಇವರಿಬ್ಬರು ಕೂತಿದ್ದ ಸೋಫಾ ಅವಳ ಕೆಲಸದ ಮೇಜಿನ ಪಕ್ಕಕ್ಕಿತ್ತು. ಅದರ ಹಿಂದೆ ಒಂದು ಸಣ್ಣ ಕಪಾಟಿನ ಮೇಲೆ ಕಾಫಿ ಮಷೀನ್ ಇತ್ತು. ಆ ಕಪಾಟಿನ ಪಕ್ಕ ಒಂದು ಮ್ಯಾಗಝಿನ್ ಗಳನ್ನ ಇಡುವ ಬೋರ್ಡ್ ಇತ್ತು. ಕೋಣೆಯ ಮುಖ್ಯ ದ್ವಾರದ ಪಕ್ಕ ಒಂದು ಬಾತ್ ರೂಮ್ ಕೂಡಾ ಇತ್ತು. ಕೋಣೆಯ ಗೋಡೆಗಳ ಮೇಲೆ ಜಾಣ್ಮೆ ಬರಹಗಳಿದ್ದ ಪಟಗಳಿದ್ದವು. ಒಟ್ಟಾರೆ ಆ ಕೋಣೆ ತುಂಬಾ ಮಹತ್ವಾಕಾಂಕ್ಷಿಯಾಗಿತ್ತು.
ನಿಶ್ವಿಕಾಳಿಗೆ ಇದ್ದಕ್ಕಿದ್ದಂತೆ ವಶಿಷ್ಠ ಆ ಕೋಣೆಯಲ್ಲಿ ತನ್ನ ಜೊತೆ ಕೂತಿರುವುದು ನೆನಪಿಗೆ ಬಂದು 'ಇದೆಲ್ಲಾ ನಿನ್ನ ಕೃಪೆ. ನಿನ್ನಿಂದಾಗಿ ಮಾಡಿಕೊಂಡಿದ್ದು. ನೀನು ಇಲ್ಲದ್ದಿದ್ದರೆ ಇಷ್ಟೆಲ್ಲಾ ನನ್ನ ಕೈಯಲ್ಲಿ ಮಾಡಲಾಗುತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿರುವುದೇ ನಿನ್ನಿಂದಾಗಿ. ಅಂತದರಲ್ಲಿ ನೀನು ಎಲ್ಲಾ ಬಿಟ್ಟು ಹೋಗುವ ವಿಚಾರ ಮಾಡುತ್ತಿದ್ದೀಯಲ್ಲ. ನಿನಗೆ ತಲೆಗಿಲೆ ಕೆಟ್ಟಿದೆಯೇ' ಎಂದು ನಡುಗುವ ಸ್ವರದಲ್ಲಿ ಕೇಳಿದಳು. ಅವನು 'ನನ್ನನ್ನು ನಂಬಬೇಡ. ನಾನು ಯಾರಿಗೂ ಮಾರ್ಗದರ್ಶಿಯಾಗಲು ಲಾಯಕ್ಕಿಲ್ಲ. ಕಣ್ಮುಂದೆ ಮೋಸ ನಡೀತಾ ಇದ್ದರೂ ಸುಮ್ಮನಿದ್ದುದ್ದಕ್ಕೆ ಈ ಶಿಕ್ಷೆ ಸಿಕ್ಕಿದೆ ಬಿಡು. ಕಂಪೆನಿ ಮುಳುಗುತ್ತಾ ಇದೆ ಎಂದು ಗೊತ್ತಾಗಿ ಜಾಗೃತನಾಗುವವರೆಗೆ ತಡವಾಯಿತು. ಒಳಗೊಳಗಿಂದ ಎಲ್ಲಾರೂ ಹಣ ಕೊಳ್ಳೆಹೊಡೆದರು. ನನಗೆ ಮೋಸ ಮಾಡಿದರು' ಅಂದು ಬಿಕ್ಕಿಬಿಕ್ಕಿ ಅಳಹತ್ತಿದನು. ಅವಳಿಗೆ ಏನು ಹೇಳಬೇಕೆಂದು ತೋಚದೆ ಸುಮ್ಮನೆ ಸೋಫಾದಿಂದೆದ್ದು ಒಂದು ಕಪ್ಪಿನಲ್ಲಿ ಕಾಫಿ ಬೆರೆಸಿ ಅವನ ಕೈಯಲ್ಲಿ ಇರಿಸಿದಳು. ತಾನು ಮಗದೊಂದು ಕಪ್ಪನ್ನು ಹಿಡಿದುಕೊಂಡು ಹೈಹೀಲ್ಡ್ ಬಿಚ್ಚಿ ಅವನ ಎದುರು ನೆಲದ ಮೇಲೆ ಹಾಸಿದ್ದ ರಗ್ಗಿನ ಮೇಲೆ ಕುಳಿತಳು.
ಮತ್ತೊಮ್ಮೆ ಅಲ್ಲಿ ಮೌನ ಆವರಿಸಿತು. ನಿಶ್ವಿಕಾಳ ತಲೆಯಲ್ಲಿ ತನ್ನ ಜೀವನದಲ್ಲಿ ಹಿಂದೆ ನಡೆದುಹೋದ ಅದೆಷ್ಟೋ ಆಗುಹೋಗುಗಳು ಒಂದರ ಹಿಂದೆ ಒಂದರಂತೆ ನೆನಪಿಗೆ ಬರಹತ್ತಿದವು. ವಶಿಷ್ಠನ ಜೊತೆ ಎಂಟನೇ ತರಗತಿಯಿಂದ ಎಂ.ಬಿ.ಎ ಮುಗಿಸಿ ಎರಡು ವರ್ಷ ಕೆಲಸ ಮಾಡುವವರೆಗಿನ ದಿನಗಳು; ಅವನ ಮೇಲಿನ ಕಳಕಳಿ ಪ್ರೀತಿಗೆ ತಿರುಗಿ ಅದನ್ನು ಅವನಲ್ಲಿ ಪ್ರಸ್ತಾಪಿಸಿದ ದಿನಗಳು; ಅವನು ತಾನು ತನ್ನದೇ ಜಾಹೀರಾತು ಸಂಸ್ಥೆ ತೆಗೆಯುವವನಿದ್ದೇನೆ. ಸದ್ಯಕ್ಕೆ ಮದುವೆಗೆ, ಅವಳಿಗೆ ತನ್ನ ಬಳಿ ಟೈಮ್ ಇಲ್ಲ ಅಂದಿದ್ದು; 'ಹೋಗಲಿ, ನನ್ನನ್ನು ನಿನ್ನ ಕಂಪೆನಿಯ ಪ್ರಮುಖ ಸ್ಥಾನಕ್ಕೆ ತೆಗೆದುಕೋ. ಆ ರೀತಿಯಲ್ಲಾದರೂ ನಿನ್ನ ಜೊತೆ ಇರುತ್ತೇನೆ' ಎಂದು ಅವಳು ಬೇಡಿಕೊಂಡದ್ದು; ಅದಕ್ಕುತ್ತರವಾಗಿ ಅವನು 'ನೀನಿನ್ನೂ ಸಣ್ಣವಳು. ನಿನಗೆ ಇದೆಲ್ಲ ತಿಳಿಯುವುದಿಲ್ಲ' ಅಂದಿದ್ದು; ಇವಳು ಕೂಡಲೇ ಅಪ್ಪ ಅಮ್ಮ ನೋಡಿದ ಶ್ರೀಮಂತ ಹುಡುಗನ ಮದುವೆ ಆಗಿದ್ದು; ಮದುವೆ ಆದ ಬೆನ್ನಲ್ಲೇ ವಶಿಷ್ಠನಿಗೆ ಸವಾಲು ಒಡ್ಡುವಂತೆ ತನ್ನದೇ ಆದ ಸೌಂದರ್ಯ ಉತ್ಪನ್ನಗಳ್ಳನ್ನು ಮಾರುವ ಕಂಪನಿ 'ಬ್ಯೂಟಿಪ್ರೊ.ಕಾಮ್' ಹುಟ್ಟುಹಾಕಿದ್ದು; ಮೊದಮೊದಲಿಗೆ ಅವಳು ತನ್ನ ಸಂಸ್ಥೆಯನ್ನು ಅಸ್ತಿತ್ವದಲ್ಲಿರಿಸಲು ಹಗಲುರಾತ್ರಿ ಒಬ್ಬಂಟಿಯಾಗಿ ಕಷ್ಟಪಟ್ಟಿದ್ದು; ತನ್ನ ಕೈಕೆಳಗೆ ಕೆಲಸ ಮಾಡುವವರು ಒಳ್ಳೆಯವರಿದ್ದದ್ದರಿಂದ ಅವಳ ಕಂಪನಿಯೂ ಸ್ವಲ್ಪಮಟ್ಟಿಗೆ ಹೆಸರುವಾಸಿಯಾಗಿದ್ದು; ಹೀಗೆಲ್ಲ ನಡೆದು ಐದಾರು ವರುಷಗಳೇ ಕಳೆದು ಹೋಗಿದ್ದು; ಇವೆಲ್ಲವನ್ನು ನೆನೆಸಿಕೊಂಡು ಎದೆಯಲ್ಲಿ ಒಂದು ರೀತಿಯ ಛಳಕ್ಕು ಮೀಟಿತು.
ಅವಳು ಈಗ ತನ್ನೆದುರಿಗೆ ಹತಾಶನಾಗಿ ಕೈಚೆಲ್ಲಿ ಕುಳಿತ ಒಂದು ಕಾಲದಲ್ಲಿ ತನ್ನ ಪ್ರಿಯಕರನಾಗಿದ್ದ, ತನ್ನ ಆದರ್ಶವಾಗಿದ್ದ ವಶಿಷ್ಠನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಹತ್ತಿದಳು. ಒಂದೆರಡು ನಿಮಿಷ ಒಬ್ಬರನ್ನೊಬ್ಬರು ದುರುಗುಟ್ಟಿ ನೋಡಿ ಒಂದೇ ಸವನೇ ಸಂಭಾಷಣೆ ಚುರುಕುಗೊಳಿಸಿದರು. ಅವಳು 'ಬೇರೆ ಕೆಲಸ ಹುಡುಕು. ಬುದ್ಧಿವಂತನಿದ್ದೀಯೆ'. ಅವನು 'ಇಷ್ಟವಿಲ್ಲ'. ಅವಳು 'ಇಲ್ಲಿಗೆ ಬಾ. ನನ್ನ ಜೊತೆ ಸೇರು'. ಅವನು 'ಬೇಡ. ಇದು ನೀನು ಸಾಕಿದ ಕೂಸು. ನಿನ್ನ ಕನಸು ಹಾಳು ಮಾಡಲಾರೆ'. ಅವಳು 'ಅಮ್ಮನಿಗೆ ಹೇಳಿದ್ದೀಯಾ? ಊರಿಗೆ ಹೋಗಿ ಸ್ವಲ್ಪ ದಿವಸ ಇರು'. ಅವನು 'ಇಲ್ಲ. ಊರು ಬೇಡ. ಮತ್ತೆ ಮೋಹಪಾಶಕ್ಕೆ ಒಳಗಾಗುವ ಭಯ'. ಅವಳು 'ಮತ್ತಿನೇನು ಪ್ಲಾನು ನಿಂದು'. ಅವನು 'ಸಧ್ಯಕ್ಕೆ ಏನೂ ಇಲ್ಲ'. ಅವಳು 'ಮತ್ತೇ ಎಲ್ಲಿಗೋ ಹೋಗುತ್ತಿ ಅಂದೇ'. ಅವನು 'ಹಾಂ. ಹಿಮಾಲಯಕ್ಕೆ'. ಅವಳು 'ಅಲ್ಲಿ ಏನಿದೆ ಲೈಫು?'. ಅವನು 'ಈಶ್ವರನಿದ್ದಾನೆ. ಕಾಯುತ್ತಾನೆ'. ಅವಳು 'ನೀನ್ಯಾವಾಗ ದೇವರನ್ನು ನಂಬ ಹತ್ತಿದಿ?'. ಅವನು 'ಅವನೇ ಕಣ್ತೆರೆಸಿದಾಗ'. ಅವಳು 'ನೀನು ತಲೆಮರೆಸಿಕೊಳ್ಳುತ್ತಿದ್ದೀಯಾ?'. ಅವನು 'ಇಲ್ಲ. ಮನಃಶಾಂತಿ ಕಂಡುಕೊಳ್ಳುತ್ತಿದ್ದೇನಷ್ಟೆ'. ಅವಳು 'ಕೈಖರ್ಚಿಗೆ ಏನು ಮಾಡುವೆ?'. ಅವನು 'ಸ್ವಲ್ಪ ಸೇವಿಂಗ್ಸ್ ಇದೆ. ಆಹಾರ ನೀರಿಗೆ ಧರ್ಮಛತ್ರಗಳಿವೆ'. ಅವಳು 'ಇನ್ನೂ ನಿನ್ನ ವಯಸ್ಸು ಮೂವತ್ತಷ್ಟೇ. ತುಂಬಾ ದೊಡ್ಡ ಜೀವನ ಬಾಕಿ ಇದೆ. ಇಷ್ಟು ಬೇಗ ಸನ್ಯಾಸಿ ಆಗುತ್ತೀಯೆ?'. ಅವನು 'ಅಷ್ಟೆಲ್ಲಾ ಮುಂದಿನ ಬಗ್ಗೆ ವಿಚಾರ ಮಾಡಿಲ್ಲ. ಸಾಧು ಸಂತನಾಗುವಷ್ಟು ವಿಶಾಲ ಹೃದಯ ನನಗಿಲ್ಲ'. ಅವಳು 'ನಾನೂ ಬರುತ್ತೇನೆ'. ಅವನು 'ಕೆಲವೊಮ್ಮೆ ಪ್ರಯಾಣ ಒಬ್ಬರೇ ನಡೆಸಬೇಕು'.
ಅವನು ಮತ್ತೆ ಅಂತರ್ಮುಖಿಯಾದನು. ಅವಳ ಕಣ್ಣಲ್ಲಿ ಸಣ್ಣದೊಂದು ನೋವಿನ ನೀರು ಜಿನುಗಿತು. ಅದು ಅವನಿಗೆ ಕಾಣಬಾರದೆಂದು ಕೂಡಲೇ ತನ್ನ ಮುಖವನ್ನ ಬಲಕ್ಕೆ ತಿರುಗಿಸಿದಳು. ಹೊರಗಡೆ ಬೆಳಗ್ಗಿನಿಂದ ಎಡಬಿಡದೆ ಜಿಟಿಜಿಟಿ ಸುರಿಯುತ್ತಿದ್ದ ಆದ್ರಾ ಸೋನೆ ಆಗಷ್ಟೇ ನಿಂತದ್ದು ಗಾಜಿನ ಮೂಲಕ ಕಾಣುತ್ತಿತ್ತು.
- ಶಿಲ್ಪ ಶಾಸ್ತ್ರಿ