Saturday 4 August 2018

ಕ್ಷಮಾರ್ಪಣಾಮಸ್ತು!!

ಅದು ಎರಡು ಬೆಡ್ ರೂಮ್ ಇರುವ ಒಂದಸ್ತಿನ ಮನೆ. ಮೇಲಿನ ಕೋಣೆ ಮಕ್ಕಳಿಗೆ ಮತ್ತು ಕೆಳಗಡೆ ಗಂಡ ಹೆಂಡತಿಯ ವಾಸ. ಎದುರು ಬದುರು ಎರಡು
ಮೂರಂತಸ್ತಿನ ಮನೆಗಳಿದ್ದರೂ ಅವು ಒಂದಕ್ಕೊಂದು ತಾಗಿಕೊಂಡಿರಲಿಲ್ಲ. ಹಾಗಾಗಿ ಅವರ ಇವರ ಮನೆ ಜಗಳ, ಗಲಾಟೆ, ಆಗುಹೋಗುಗಳು ಒಬ್ಬರಿಗೊಬ್ಬರಿಗೆ ಕೇಳುವುದು ತುಂಬಾ ಕಮ್ಮಿ. ಅದಲ್ಲದೆ ಜನಜಂಗುಳಿಯಿಂದ ಗಿಜಿಗಿಜಿಗುಡುತ್ತಿರುವ ಈ ಊರಲ್ಲಿ ಎಲ್ಲರಿಗು ತಮ್ಮತಮ್ಮದೆ.

ಪ್ರಮೀಳಾ ಮತ್ತು ಗುರುಸ್ವಾಮಿ ಮದುವೆಯಾಗಿ ಅಂದಾಜು ಹದಿನೇಳು ಹದಿನೆಂಟು ವರುಷಗಳೇ ಆಗಿದ್ದವು. ದೊಡ್ಡಮಗ ನಿತೀಶ ಪ್ರಥಮ ಪಿ.ಯು.ಸಿ ಯಲ್ಲಿದ್ದರೆ ಕಿರಿಮಗ ನಟೇಶ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಪ್ರಮೀಳಾ ಅಷ್ಟೇನೂ ಕಲಿತವಳಲ್ಲ. ಅವಳ ಕಲಿಕೆಯೆಂದರೆ ನಾಲಕ್ಕನೇ ಕ್ಲಾಸ್ ನಾಪಾಸ್. ಗುರುಸ್ವಾಮಿ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸುಮಾರಾದ ಕೆಲಸವೊಂದನ್ನು ಹೊಂದಿದ್ದನು. ಅವನ ಸಂಬಳ ಮೂರು ಹೊತ್ತು ಎಲ್ಲರ ಹೊಟ್ಟೆ ತುಂಬಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲುತಿತ್ತು. ಮಕ್ಕಳು ತಮ್ಮತಮ್ಮ ಮಟ್ಟಿಗೆ ಕಲಿಕೆಯಲ್ಲಿ ಮುಂದಿದ್ದರು.

ಪ್ರಮೀಳಾ ವಿದ್ಯಾವಂತಳಲ್ಲದ್ದಿದ್ದರು ದಡ್ಡಿಯಲ್ಲ. ವ್ಯವಹಾರ ಜ್ಞಾನ, ಸಮಯಪ್ರಜ್ಞೆ, ಸುಮಾರಾಗಿ ತಿಳುವಳಿಕೆಯುಳ್ಳವಳು. ಅವಳು ನೆರೆಹೊರೆಯವರೊಂದಿಗೆ ಎಷ್ಟುಬೇಕೋ ಅಷ್ಟು, ಗಂಡ ಮಕ್ಕಳೊಂದಿಗೆ ಅವರಿಗೆ ಬೇಕಾದಂತೆ ಒಗ್ಗಿಕೊಂಡು, ಬಂಧು ಬಾಂಧವರೊಂದಿಗೆ ಘನತೆಗೆ ತಕ್ಕಂತೆ ನಡೆದುಕೊಂಡು ಹೋಗುತ್ತಿದ್ದಳು.
ಗುರುಸ್ವಾಮಿ ಬೆಳ್ಳಂಬೆಳಗ್ಗೆ ಆಫೀಸಿಗೆ ಹೋಗಿ ಒಂಭತ್ತು ತಾಸಿನ ಕೆಲಸ ಮುಗಿಸಿ ಮನೆಗೇನಾದರು ಸಾಮಾನು ಸರಂಜಾಮು ತೆಗೆದುಕೊಂಡು ನೇರವಾಗಿ ಮನೆಗೆ ಬರುತ್ತಿದ್ದನು. ಅವನಿಗೆ ಅಪರೂಪಕ್ಕೊಮ್ಮೆ ಸಿಗರೇಟು, ಎಲೆ ಅಡಿಕೆ ಹಾಕುವ ಚಟವಿತ್ತೇ ಹೊರತು ಬೇರಾವ ವ್ಯಸನವಿರಲಿಲ್ಲ.
ಅಥವಾ ಅಂತದ್ದೇನಾದರೂ ಇತ್ತೇ?

ಪ್ರಮೀಳಾ ಒಂದು ರಾತ್ರಿ ಎಂದಿನಂತೆ ದಿನದ ಕೆಲಸ ಮುಗಿಸಿ, ಮೊಸರಿಗೆ ಹೆಪ್ಪು ಹಾಕಿ, ಮರುದಿನಕ್ಕೆ ತರಕಾರಿ ಹೆಚ್ಚಿಟ್ಟು ಗಂಡನೊಂದಿಗೆ ತಾನು ಕೋಣೆ ಸೇರಿ ಮಲಗಲು ತಯಾರಿ ನಡೆಸಿದ್ದಳು. ಇದ್ದಕ್ಕಿದ್ದಂತೆ ಮನೆ ಬಾಗಿಲನ್ನು ಲಘುವಾಗಿ ಯಾರೋ ತಟ್ಟಿದಂತೆ ಕೇಳಿ ಗಂಡನೆಡೆಗೆ ತಿರುಗಿದಳು. ಅವನು ಅವಳೆಡೆ ನೋಡದೆ 'ಬಾಗಿಲು ತೆರೆದು ಅವರನ್ನು ಇಲ್ಲಿಗೆ ಕರೆದು ತಾ' ಅಂದಾಗ ಏನೋ ಒಂದು ತರಹದ ಭಯ ಮಿಶ್ರಿತ ಆಶ್ಚರ್ಯವಾಯಿತು. ಗಂಡ ಯಾರೋ ಬರುತ್ತಾರೆ ಎಂದು ತಿಳಿದಿದ್ದನೇ? ಇಷ್ಟು ಹೊತ್ತು ಎಚ್ಚರವಿದ್ದು ಅವರ ದಾರಿ ಕಾಯುತ್ತಿದ್ದನೇ??. ಸರಿ ಯಾರೆಂದು ನೋಡೋಣವೆಂದು ಬಾಗಿಲು ತೆರೆದರೆ ಎದುರಿಗೆ ತಲೆತುಂಬ ಸೆರಗು ಹೊದ್ದ ಸಾಧಾರಣ ಮೈಕಟ್ಟಿನ ಅಷ್ಟೇನೂ ಸುಂದರವಿರದ ಹೆಂಗಸೊಬ್ಬಳು ನಿಂತಿದ್ದಾಳೆ. ಪ್ರಮೀಳಾಳಿಗೆ ಅವಳ ಗುರುತು ಹತ್ತಲಿಲ್ಲ. ಸುತ್ತಮುತ್ತ ನೋಡಿದ ಹಾಗೂ ಇಲ್ಲವಲ್ಲ ಇವಳನ್ನ ಅಂದುಕೊಳ್ಳುತ್ತಿದಂತೆ ಗಂಡನ 'ಒಳಗಡೆ ಬಾ ' ಎಂದು ಕರೆವ ಧ್ವನಿ ಕೇಳಿಸಿತು . ಆ ಹೆಂಗಸು ಪಟಪಟನೆ ಮನೆಗೆ ನುಗ್ಗಿ ತನ್ನನ್ನು ಕೈಯಲ್ಲಿ ಅತ್ತ ಸರಿಸಿ ಒಳ ಹೋದ ಹಾಗೆ ಭಾಸವಾಯಿತು. ಈ ಅಪರಾತ್ರಿ ಹನ್ನೊಂದು ಘಂಟೆಯಲ್ಲಿ ಏನಿದು, ಏನು ನಡೀತಾ ಇದೆ ಎಂದು ಏನೊಂದು ಅರ್ಥವಾಗದೆ ಮನೆಯ ಹೊರಗಡೆ ಒಮ್ಮೆ ಕಣ್ಣು ಹಾಯಿಸಿ ಯಾರು ನೋಡುತ್ತಿಲ್ಲವೆಂದು ಖಾತ್ರಿಪಡಿಸಿಕೊಂಡು ಕದವನ್ನು ಮುಚ್ಚಿದಳು.

ನಿಧಾನಕ್ಕೆ ತಮ್ಮ ವಾಸಕೋಣೆಯ ಕಡೆ ನಡೆದು ಒಳ ನೋಡಿದರೆ ಗುರುಸ್ವಾಮಿ ಆ ಹೆಂಗಸಿನ ತೆಕ್ಕೆಯಲ್ಲಿ ಅವಳ ಸೆರಗು ಜಾರಿಸುತ್ತ ಮಲಗಿದ್ದ. ಪ್ರಮೀಳಾಳಿಗೆ ಮೈಯೆಲ್ಲ ಛಳ್ಳೆಂದು ನಡುಕ ಹುಟ್ಟಿತು. ಎದೆ ಬಡಿತ ಜೋರಾಯಿತು. ತಲೆಮೇಲೆ ದೊಡ್ಡದೊಂದು ಮರದ ದಿಮ್ಮಿ ಹೊಡೆದಂತಾಯಿತು. ಕಾಲ್ಕೆಳಗಿನ ಭೂಮಿ ಬಿರಿದಂತೆ ಅನಿಸಿತು. ಆಗಷ್ಟೇ ತಿಂದ ಊಟ ಜೀರ್ಣವಾಗದೆ ವಾಂತಿ ಬಂದಂತಾಯಿತು. ಸಿಟ್ಟು, ದುಃಖ ಎಲ್ಲಾ ಒಮ್ಮೆಲ್ಲೇ ಎದೆಯೊಳಗಿಂದ ಹೊರಚಿಮ್ಮಿದಂತಾಯಿತು. ಅವಳಿಗೆ ಪರಿಸ್ಥಿತಿ ಅರ್ಥವಾಗುವಷ್ಟರಲ್ಲಿ, ಗುರುಸ್ವಾಮಿ 'ಶ್!!!        ಏನೂ ಗಲಾಟೆ ಮಾಡದೆ ಪಕ್ಕದಲ್ಲಿ ಬಂದು ಸುಮ್ಮನೆ ಮಲಗಿಕೋ' ಎಂದು ತನ್ನ ಘನಂದಾರಿ ಕೆಲಸವನ್ನು ಮುಂದುವರೆಸಿದ.

ಅಯ್ಯೋ ಶಿವನೇ! ಇದೆಂತಾ ಕರ್ಮ. ನಾನ್ಯಾವ ಜನ್ಮದಲ್ಲಿ ಪಾಪ ಮಾಡಿದ್ದೆ. ನನ್ನನ್ನೀಗಲೇ ಸಾಯಿಸಿಬಿಡು. ನನ್ನಿಂದಿದನ್ನು ನೋಡಲಾಗುವುದಿಲ್ಲ ಎಂದು ಮನಮಡುವಾಗಿಸಿಕೊಂಡು ತನ್ನ ಮುಖ ಇನ್ನೊಂದು ದಿಕ್ಕಿಗೆ ಹಾಕಿ ಮಲಗಿದಳು. ಇದ್ದಕ್ಕಿದ್ದ ಹಾಗೆ ಮಕ್ಕಳು ಕೆಳಗಡೆ ಬಂದರೆ ಎಂದು ಹೆದರಿಕೆಯಾಯಿತು. ಈ ಹೆಂಗಸು ಮನೆ ಒಳಗಡೆ ಬಂದದನ್ನು ಬೇರೆಯಾರಾದರು ನೋಡಿದರೋ ಹೇಗೆ ಎಂಬ ವಿಚಾರ ಮನದಲ್ಲೆದ್ದಿತು . ಹಾಗೇನಾದರು ತನ್ನ ಕೇಳಿದರೆ ಮನೆಗೆಲಸದವಳೆನ್ನಲೆ ಅಥವಾ ತಂಗಿ ಎನ್ನಲೇ ಎಂದು ಮನಸಲ್ಲೇ ಮಂಡಿಗೆ ತಿಂದಳು. ಆದರೂ ಯಾರೀಕೆ? ಎಲ್ಲಿಂದ ಬಂದಳು?
ಇಂತಹ ತಡರಾತ್ರಿಯಲ್ಲಿ ಮನೆಯಲ್ಲಿ ಪರಹೆಂಗಸೇ?

ಬೆಳಗಿನ ಜಾವ ಐದು ಘಂಟೆಗೆ ಎಚ್ಚರವಾಗಿ ತಿರುಗಿ ನೋಡಿದರೆ ಗಂಡ ಜೋರಾಗಿ ಗೊರಕೆ ಹೊಡೆಯುತ್ತಿದ್ದ. ನನಗ್ಯಾವಾಗ ಕಣ್ಣು ಹತ್ತಿತು, ಆ ಹೆಂಗಸು ಯಾವಾಗ ಹೊರಹೋದಳು, ಬೆಡ್ ರೂಮ್ ಬಾಗಿಲು ಮುಚ್ಚಿತ್ತೋ ಇಲ್ಲವೋ ಎಂದು ಪ್ರಮೀಳಾಳಿಗೆ ಒಂದೂ ಅರಿಯದಾಯಿತು. ಗಂಡನ ಆಫೀಸು ಬಸ್ಸು ಬರಲು ಇನ್ನು ಒಂದೇ ತಾಸಿದೆ ಎಂದು ಗಡಿಬಿಡಿಯಿಂದ ಹಾಸಿಗೆ ಬಿಟ್ಟು ಎದ್ದಳು. ತಿಂಡಿ ತಯಾರಿಸುವಾಗ, ಗಂಡನಿಗೆ ಬಡಿಸುವಾಗ, ಮಕ್ಕಳ್ಳನ್ನೆಬ್ಬಿಸಿ ಶಾಲೆಗೆ ಕಳುಹಿಸುವಾಗ ತನಗೇನೋ ಗರಬಡಿದವಳಂತೆ ಯಾಂತ್ರಿಕವಾಗಿ ತಿರುಗುತ್ತಿದ್ದಳು. ಎಂದಿನಂತೆ ಆ ದಿನ ಕಳೆದು ರಾತ್ರಿಯಾಗುತ್ತಿದ್ದಂತೆ ವಾಸ್ತವಕ್ಕೆ ಬರ ಹತ್ತಿದಳು.
ಆ ಹೆಂಗಸು ಇಂದು ಕೂಡ ತಿರುಗಿ ಬರುವಳೇ?

ಸರಿಸುಮಾರು ಹತ್ತೂವರೆ ರಾತ್ರಿಗೆ ಮನೆಯ ಬಾಗಿಲು ಮತ್ತೆ ಮೆತ್ತಗೆ ಬಾರಿಸಿತು. ಪ್ರಮೀಳಾಳಿಗೆ ಬಾಯಿ ಒಣಗತೊಡಗಿತು. ಜೀವ ಅದುರತೊಡಗಿತು. ತಲೆ ಧಿಮ್ಮೆನ್ನತೊಡಗಿತು. ಇದರ ಮಧ್ಯೆ ಗಂಡ ಮತ್ತೆ ಆದೇಶ ಕೊಟ್ಟದ್ದು ಕೇಳಲೇ ಇಲ್ಲ . ಗುರುಸ್ವಾಮಿ ಮಗದೊಮ್ಮೆ ಜೋರಾಗಿ ಅವರನ್ನು ಒಳ ಕರೆ ಎಂದಾಗ ತಾನು ಅಚಾನಕ್ಕಾಗಿ ಹೊರಒಡಿ ಬಂದು ಮನೆ ಬಾಗಿಲು ತೆರೆದು ಅಲ್ಲಿ ನಿಂತ ಹೆಂಗಸನ್ನ ಸರಕ್ಕನೆ ಒಳಗೆಳೆದು ಬಾಗಿಲು ಹಾಕಿದಳು.

ಮೈಮೇಲಿನ ಆವೇಶ ಕಮ್ಮಿ ಆಗಿ ಪಕ್ಕದಲ್ಲಿದ್ದ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ನಿಂತಳು. ಗಂಡನ ಜೊತೆ ಜಗಳವಾಡಬೇಕೆ? ಆ ಹೆಂಗಸಿಗೆ ಬೈಯ್ಯಬೇಕೆ? ಜೋರಾಗಿ ಕೂಗಿ ಮಕ್ಕಳ್ಳನ್ನ ಕೆಳಗೆ ಕರೆಯಬೇಕೆ ಇಲ್ಲ ಎರಡು ಬೀದಿ ಆಚೆ ಇರುವ ಅಪ್ಪನ ಮನೆಗೆ ಓಡಬೇಕೇ? ಒಂದು ತೋಚದಾಯಿತು. ಅದೆಲ್ಲ ಏನೂ ಬೇಡ ಎಂದು ತಲೆ ಕೊಡಹಿ ತನ್ನ ಒಳನೋವನ್ನು ಹಾಗೆ ನುಂಗಿಕೊಂಡು ಬೆಡ್ ರೂಮ್ ಬಾಗಿಲನ್ನು ಇಂದು ತಾನೇ ಮುಚ್ಚಿದಳು .

ಗಟ್ಟಿಯಾಗಿ ಕಿವಿ ಕಣ್ಣು ಮುಚ್ಚಿದರೂ ಮನದಲ್ಲಿ ನೂರಾರು ಆಲೋಚನೆಗಳು ಪುಟಿದೇಳುತ್ತಿದ್ದವು. ತನ್ನನು ಪಕ್ಕದಲ್ಲೇ ಇರಿಸಿಕೊಳ್ಳಲ್ಲು ಇವರಿಗೆಷ್ಟು ಧೈರ್ಯ? ತಾನೇನು ಅಷ್ಟು ನಿಕೃಷ್ಟ ಪ್ರಾಣಿಯೇ? ಮಕ್ಕಳು ನೆರೆಕೆರೆಯವರು ನೋಡಿದರೆ ಎಂಬ ಒಂದು ಚೂರು ಹೆದರಿಕೆಯಿಲ್ಲವಲ್ಲ? ಇದು ಎಷ್ಟು ದಿವಸದಿಂದ ನಡೀತಾ ಇದೆ? ಈ ಚಟ ಇವರಿಗೆ ಯಾವಾಗ ಹತ್ತಿತು? ಇವಳ ಜೊತೆ ಎಷ್ಟು ದಿನದ ಸಂಬಂಧ? ಇವರ ಜೀವನದಲ್ಲಿ ಒಬ್ಬಳೇ ಇರುವಳೋ ಅಥವಾ?.

ಗಂಡಸರಿಗೆ ಕಾಮತೃಷೆ ಜಾಸ್ತಿ ಎಂದು ಕೇಳಿದ್ದೆ. ಆದರೆ ಅದೇ ನನ್ನ ಪಾಲಿಗೆ ಶತ್ರುವಾಗುತ್ತದೆ ಅಂದುಕೊಂಡಿರಲಿಲ್ಲ ಎಂದು ಮಮ್ಮಲ ಮರುಗಿದಳು. ಇವರಿಗೆ ನಾನೇನು ಕಮ್ಮಿ ಮಾಡಿದ್ದೆ? ನಾನು ಹಳಸಿದನೆ? ತಾನು ದಡ್ಡಿ ತನಗೇನು ತಿಳಿಯುವುದಿಲ್ಲ ತಾನು ಯಾರಿಗೂ ಹೇಳುವುದಿಲ್ಲ ಎಂಬ ಭಾವನೆಯೇ? ನಿಜವಾಗಿಯೂ ನನ್ನಿಂದೇನಾದರೂ ತಪ್ಪು ನಡೆದು ಬಿಟ್ಟಿದೆಯೇ? ನನ್ನನ್ನು ಹಳಿಯಲು ಇವರು ಕಂಡುಕೊಂಡ ರೀತಿಯೇ ಅಥವಾ ಸುಮ್ಮನೆ ಇದೊಂದು ಭಂಡ ಶೋಕಿಯೇ? ಒಂದು ತಿಳಿಯುತ್ತಿಲ್ಲವಲ್ಲ ಎಂದು ಕೊರಗಿದಳು.
ಇವಳ ತುಮುಲ, ಸಿಟ್ಟು, ಪೇಚಾಟ ಗುರುಸ್ವಾಮಿಗೆ ಅರ್ಥವಾಗುತ್ತಿದೆಯೇ?

ಹೀಗೆಲ್ಲ ಪ್ರಮೀಳಾಳ ಬಾಳಲ್ಲಿ ನಡೆದು ಹೋಯಿತು. ಅವಳು ಯಾರೊಬ್ಬರಲ್ಲೂ ತುಟಿಪಿಟಕ್ಕೆನ್ನಲಿಲ್ಲ. ಗಂಡನಲ್ಲಿ ಒಂದೂ ಪ್ರಶ್ನೆಯನ್ನು ಇದುವರೆಗೆ ಕೇಳಲಿಲ್ಲ. ಇದೀಗ ಸುಮಾರು ನಾಲ್ಕಾರು ವರುಷಗಳೇ ಕಳೆದಿವೆ. ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಹಾಸ್ಟೇಲು, ಪರದೇಶ ಸೇರಿದ್ದಾರೆ . ಗುರುಸ್ವಾಮಿ ಪರಸ್ತ್ರೀ ಸಹವಾಸವನ್ನು ದೈನಂದಿನ ಚಟುವಟಿಕೆಯಂತೆ ಮುಂದುವರೆಸಿದ್ದಾನೆ. ಆ ಹೆಂಗಸರಲ್ಲಿ ಬೇರೆ ಬೇರೆಯವರು ಬರುತ್ತಿದ್ದರು. ಒಬ್ಬಳೇ ದಿನಾ ಬರುತ್ತಿರಲಿಲ್ಲ ಅನ್ನುವುದೊಂದೇ ಸಮಾಧಾನ. ಬಂಧುಗಳನ್ನು ರಾತ್ರಿ ಅಷ್ಟಾಗಿ ಉಳಿಸಿಕೊಳ್ಳುತ್ತಿರಲಿಲ್ಲ. ಇವಳೂ ಎಲ್ಲೂ ಉಳಿಯುತ್ತಿರಲಿಲ್ಲ. ಗುರುಸ್ವಾಮಿ ಇದೆಲ್ಲ ಅರ್ಥವಾದರೂ ಅವಳನ್ನ ಕಡೆಗಣಿಸಿದ್ದಾನೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಸಂಸಾರದಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದಾನಲ್ಲ ಎಂಬುದಷ್ಟೇ ಅವಳಿಗೆ ತೃಪ್ತಿ.

ಪ್ರಮೀಳಾ ತನ್ನೆಲ್ಲ ಕಷ್ಟ ಕಾರ್ಪಣ್ಯ, ನೋವು, ಅವಮಾನ,    ದುಗುಡ ದುಮ್ಮಾನಗಳನ್ನ ತನ್ನ ಒಡಲಿಗೆ ಹಾಕಿಕೊಂಡಿದ್ದಾಳೆ. ಮೊದಮೊದಲಿಗೆ ದೇವರ ಒಡಲಲ್ಲಿ ಹಾಕಿ ಹರಕೆ ಹೊರುತ್ತಿದ್ದಳು. ಆದರೀಗೀಗ ಹರಕೆ ನೆರವೇರಿಸಲಾಗುವುದಿಲ್ಲ ಎಂದು ಮನಗಂಡು ಬರೇ ಜಪತಪಗಳಲ್ಲಿ ತಲ್ಲೀನಳಾಗಿ ಜೀವನ ಕಳೆಯುತ್ತಿದ್ದಾಳೆ.

No comments:

Post a Comment