Monday, 16 April 2012

ವೋಲ್ವೋ ಬಸ್ಸು


ಪೋಂ ಪೋಂ ಪೇಂ ಪೇಂ
ಬಂದೇ ಬಿಟ್ಟಿತು ನಮ್ಮೂರಿಗೆ ವೋಲ್ವೋ
ಅದನ್ನು ನೋಡಲು ಹತ್ತಲು ಮುದ್ದಾಡಲು ಅದೇನು ಜನರ ಗುಲ್ಲೋ

ಕೆಂಪು ಬಿಳಿ ಹಸಿರು ತ್ರಿವರ್ಣ ಧ್ವಜದಂತೆ ಕಲರ್
ಅದನ್ನು ಮದಗಜದಂತೆ ನಡೆಸುವ ಸದಾ ಸಮವಸ್ತ್ರ ಧರಿಸಿದ ಕಂಡಕ್ಟರ್ ಡ್ರೈವರ್

ಅದರಲ್ಲಿ ಕುಳಿತು ಬೇರೆಯವರನ್ನ ಪರಮಾರ್ಶಿಸುವುದೇ ಒಂದು ಚೆಂದ
ಏಕೆಂದರೆ ಕೆಲವರಿಗೆ ಅದರ ಹಮ್ಮು ಬಿಮ್ಮು ನೋಡುವುದೇ ಜೀವನದಲ್ಲಿ ಪರಮಾನಂದ

ಕೆಲವರಂತೂ ಅದರ ನಡೆಯಲ್ಲಿಗೆ ಎಂದು ಕೇಳದೆ ಹತ್ತುತ್ತಾರೆ
ಟಿಕೇಟ್ ಕಲೆಕ್ಟರ್ ಬಂದಾಗ ಅವನನ್ನು ಗುರಿ ಸರಿ ಹೇಳಲಿಲ್ಲ ಎಂದು ಬೈಯುತ್ತಾರೆ

ಇನ್ನು ಕೆಲವರು ಇಲ್ಲಿಂದ ಅಲ್ಲಿಗೆ ಹೋಗಲು ಐವತ್ತು ರೂಪಾಯಿಯಾ ಎಂದು ಮೂಗು ಮುರಿಯುತ್ತಾರೆ
ಜೊತೆಗೆ ಕರೆದುಕೊಂಡು ಬಂದವರ ಪಕ್ಕೆಗೆ ’ಅಯ್ಯೋ ದರಿದ್ರದವನೇ’ ಎಂದು ತಿವಿಯುತ್ತಾರೆ

ಇಲ್ಲಿ ಕುಳಿತವರಿಗಂತೂ ಪಕ್ಕದಲ್ಲಿರುವ ಹಳೇ ಗಾಡಿ, ಕಪ್ಪು ಬೋರ್ಡ್, ಕೆಂಪು ಬೋರ್ಡ್ ನೋಡಿ ಖುಷಿ
ಗರ್ದಿ ಗಮತ್ತಿನಲ್ಲಿ ಒಂಥರಾ ’ಲುಕ್’ ಕೊಡುವ ನಮ್ಮನ್ನು ನೋಡಿ ಹೊರಗಿನವರಿಗೆ ಹೊಟ್ಟೆಯುರಿ

ಅಲ್ಲೊಬ್ಬ ಠೊಣಪ ಯಾರೊಂದಿಗೋ ವ್ಯವಹಾರ ಮಾಡುತ್ತಿದ್ದಾನೆ
ಇಲ್ಲೊಂದು ಮಗು ತನ್ನ ಮುಗ್ಧತೆಯಿಂದ ಬಸ್ಸೆಲ್ಲಾ ವಾಸನೆ ಹರಡುತಿದೆ

ಹೈಹೀಲ್ಡ್ ಹಾಕಿದ ಸುಂದರಿಯರು ಬಂದೇ ಬಿಟ್ಟರು ತಮ್ಮ ಹಂಸ ನಡುಗೆಯಲ್ಲಿ
ಜೊಲ್ಲು ಸುರಿಸುತ್ತ ಬೆಕ್ಕಸ ಬೆರಗಾಗಿ ನೋಡುತ ಕುಳಿತರು ತರುಣರು ಪ್ರೇಮಸಲ್ಲಾಪದ ಆಸೆಯಲ್ಲಿ

ಬೆಳಗಿನಿಂದ ರಾತ್ರಿಯವರಗೆ ಸಾಫ್ಟ್ವೇರ್ ಕಂಪೆನಿಯಂತೆ ಕೆಲಸ ಮಾಡುವ ಈ ಬಸ್
ಕರಿಯ ಬಿಳಿಯ ಬೇಧ ಭಾವ ನೋಡದೆ ಊರೆಲ್ಲ ತಿರುಗುವುದ ನೊಡಿ ದಿಲ್ ಖುಷ್

                    -ಶಿಲ್ಪ ಶಾಸ್ತ್ರಿ
ಉಬ್ಬು ತಗ್ಗು


ಓ! ನಮ್ಮೂರ ರಸ್ತೆ
ನಿನಗೇಕೆ ಈ ಅವಸ್ಥೆ

ಓಂದು ಕಾಲದಲ್ಲಿ ನೀ ತಳುಕು ಬಳುಕಿನ ಸುಂದರಿ
ಈಗ ಎಲ್ಲೆಂದರಲ್ಲಿ ನೋಡು ಚರಂಡಿ ಮೋರಿ

ನಮ್ಮಲ್ಲಿ ಪ್ರೊಆಕ್ಟಿವ್ ಥಿಕಿಂಗ್ ಇಲ್ಲ ನೋಡು
ಅದಕ್ಕೆ ಎಲ್ಲೆಂದರಲ್ಲಿ ಒನ್ ವೇ, ಟೇಕ್ ಡೈವಶ್ರನ್, ರೋಡ್ ಕ್ಲೋಸ್ಡ್ ಎಂಬ ಬೋರ್ಡ್

ಅಲ್ಲೆಲ್ಲೋ ನಮ್ಮನ್ನು ಆಳುವವರು ಬಂದರು
ಕತ್ತರಿ, ತುರಾಯಿ, ಕಾಯಿ ಒಡೆಸಿ ಕೆಲಸ ಮುಂದುವರೆಸಿ ಅಂದರು

ಫ್ಲೈ ಒವರ್, ಎಕ್ಸ್ಪ್ರೆಸ್ ವೇ, ಚತುಷ್ಪಥ ಯೋಜನೆ
ಅಯ್ಯೋ! ಇಂದೂ ತಡವಾಗಿ ಮನೆ ಸೇರಬೇಕಲ್ಲ ಎಂದು ಜನರ ಚಿಂತನೆ

ಅದ್ಯಾವಗ ನಿನಗೆ ಕಾಯಕಲ್ಪವೋ
ಅದ್ಯಾವಗ ನಮ್ಮ ನಿಟ್ಟುಸಿರಿನ ಹಿಡಿತವೊ

ಎಲ್ಲಾದಕ್ಕೂ ಅಡ್ಜಸ್ಟ್ ಆಗುವವರು ನಾವು
ನಿಂತಲ್ಲೇ ನಿಂತು ಮುಂದೆಂದೋ ನನ್ ಮೇಲೆ ಖುಶಿಯಲ್ಲಿ ಓಡಾಡುವೆಯಲ್ಲೋ ’ಭೂಫ’ ಎಂದೆನ್ನುತ್ತಿರುವ ನೀವು

                                -ಶಿಲ್ಪ ಶಾಸ್ತ್ರಿ

ರಾಜಠೀವಿ


ಸಂಡಾಸು ಮಾಡಲು ಕುಕ್ಕರು ಬಡಿದ ಡೊಂಗ್ರನಿಗೆ
ತಲೆಯೆಲ್ಲಾ ತುಂಬಿದ ಆಲೋಚನೆ
ಮೊನ್ನೆ ಮೊನ್ನೆ ಶಹರದಲ್ಲಿ ನೋಡಿದ ಅರಮನೆ
ದೇವೇಂದ್ರನಿರುವ ಸ್ವರ್ಗಕ್ಕೇನು ಕಮ್ಮಿ ಇಲ್ಲ

ಅಮ್ಮನ ಕೈಯ ಒಣರೊಟ್ಟಿ ತಂಗಿಯ ರಚ್ಚೆ ಹಿಡಿದ ಅಳು
ಸುತ್ತ ಸದಾ ಸಿಂಬಳ ಸುರಿಸುತ್ತ ಚಡ್ಡಿ ಮೇಲೆರಿಸುತ್ತ ಓಡಾಡುವ ಚಿಣ್ಣರು
ಅಂದು ಟೊಂಕ್ಯನಿಗೆ ಕಸಹೆಕ್ಕುವಾಗ ಸಿಕ್ಕಿದ ಬಾರ್ಬಿ ಡಾರ್ಲಿಂಗ್
ಅನೇಕರ ಕಣ್ಣಿಗೆ ಕೈಗೆ ಸಿಗದ ಹುಳಿ ದ್ರಾಕ್ಷಿಯಾಗಿದ್ದಳು

ಒಮ್ಮೆ ತಿರುಗಿ ತನ್ನ ಜೋಪಡಿಯಡೆ ನೋಡಿದ ಕಣ್ಣು ಕೀರಲಿಸಿಕೊಂಡು
ಅದೂ ವೈಟ್ ಹೌಸಿನಂತೆ ಕಂಡಿತು ಕಣ್ಣಿಗೆ
ಮರದ ಗೊಂಬೆಯೊಂದು ಕೀರಲು ಸದ್ದು ಮಾಡದೆ ಮುರಿದು ನಿಂತಿದೆ
ಹಾಳಾಗಿ ಎಸೆದ ಅರಮನೆ ಆಟದ ಸೆಟ್ಟು, ತನ್ನನ್ನೇ ರಾಜನಂತೆ ಕಲ್ಪಿಸಿಕೊಂಡ

ಬಹೀರ್ದೆಶೆ ಮುಗಿಸಿ ಯಾಂತ್ರಿಕವಾಗಿ ಕುಳಿತ ಮುರಿದ ಮದುವೆ ಕುರ್ಚಿಯ ಮೇಲೆ
ಅನಿಸುತ್ತಿತ್ತು ತನ್ನ ಸ್ವಯಂವರ ನಡೆಯುತಿದೆ ಸುತ್ತಲೂ ಚಾಮರ ಸೇವೆ
ಕುಂಟ ನಾಯಿಯೊಂದು ಕುಳಿತ್ತಿತ್ತು ಭಕ್ತಿಭಾವದಲ್ಲಿ ಒಡೆಯನ ಎದುರು
ತನ್ನ ವಾಹನವದೆಂದು ತಾನು ಈ ಭೂಮಿಯ ಅಧಿಪತಿಯೆಂಬಂತೆ ಭಾಸವಾಯಿತು

ತನ್ನ ಕಾಲನೆತ್ತಿ ಮೂತ್ರವೆಸೆದು ಸುತ್ತ ಪರಿಧಿಯನ್ನು ರಚಿಸುತ್ತಿದ್ದ ನಾಯನ್ನು ಕಂಡು
ತನ್ನ ರಾಜ್ಯ ಇನ್ನಷ್ಟು ಬಲವಾಗುತ್ತಿದೆಯಂಬ ಧೈರ್ಯ ಮನದಲ್ಲಿ
ನೂರಾರು ಆಳುಗಳು ತನ್ನ ಸುತ್ತಮುತ್ತ ರಕ್ಷಣೆಗೆ
ತಾನೇ ದೊಡ್ಡ ಪರಾಕ್ರಮಿಯೆಂದು ತಿಳಿದು ಇಲಿ ಹೆಗ್ಗಣಗಳ ಕಡೆ ನೋಡಿದ

ಅನಾರಕಲಿಯೊಂದು ಕಮ್ಮಿ ಅದಕ್ಕೇನಂತೆ ಪಕ್ಕದ ಬೀದಿಯ ಕುಮ್ಮಿಯನ್ನು
ಕೇಳೆ ಬಿಡುವೆನು ತನ್ನ ರಾಣಿಯಾಗೆಂದು
"ಸುಬಹ್ ಸೇ ಕಹಾಂ ಪೆ ಹೈ ಬೇ ತೂ"
ಎಂದು ಮಗನ ಕಂಡ ಖುಷಿಯಲ್ಲಿ ಅಮ್ಮ ಬೆನ್ನಮೇಲೆ ರಪರಪ ಬಾರಿಸಿದಳು

                    -ಶಿಲ್ಪ ಶಾಸ್ತ್ರಿ


ಪರದಾ!


ಪರದೆಯ ಹಿಂದಿನ ಷೋಡಷ ಪ್ರೌಢಿಮೆ
ದೇವರು ಕೂಲಂಕುಷವಾಗಿ ಕೆತ್ತಿದ ಶಿಲ್ಪ
’ಈದ್ ಕಾ ಚಾಂದ್’ ತರಹ ಆಗಾಗ ಕಾಣುವ ಕಣ್ಣು
ಚುಂಬಕಶಕ್ತಿಯದಕ್ಕೆ ಬರೇ ಹಡೆಯುವ ಯಂತ್ರವಲ್ಲ

ಹೂ ಬನದ ನಡುವೆ ಹಾರಾಡುವ ಹಸಿರು ಚಿಟ್ಟೆ ರೂಪುಗೊಂಡಿದ್ದೆ ಕಂಬಳಿಹುಳದಿಂದ
ನೀಲಾಂಜನ ಪ್ರಕಾಶಿಸುವುದೇ ಹೊತ್ತಿದ ಬೆಂಕಿಕಡ್ಡಿಯಿಂದ
ನೂರೆಂಟು ದಿಕ್ಕುಗಳಲ್ಲಿ ತನ್ನ ಪ್ರಸ್ತುತಿಪಡಿಸುವಾಸೆ
ತಾನೊಬ್ಬ ಪ್ರಬುದ್ಧೆ ಎದೆಯತ್ತಿ ನಿಲ್ಲಬಲ್ಲೆ ಸಮಕಾಲೀನರ ನಡುವೆ

ಧರ್ಮ ಅಧರ್ಮಗಳ ಕಣ್ಣುಕಟ್ಟು ಗಾಂಧಾರಿಯಗಿದೆ ಈ ಜಗ
ಓ ಅಲ್ಲಾಹ್! ಬೇಗ ನನ್ನೀ ಬಂಧನದಿಂದ ಮುಕ್ತಿಪಡಿಸು ಎನ್ನುತಿದೆ ಮನ
ಮೈತುಂಬ ಸುತ್ತಿರುವ ಸಂಕೋಲೆಗಳನ್ನು ಕಿತ್ತೆಸೆದು
ಪ್ರಪಂಚವಿಡೀ ಸ್ವತಂತ್ರಹಕ್ಕಿಯಂತೆ ಹಾರಾಡುವಾಸೆ

                    -ಶಿಲ್ಪ ಶಾಸ್ತ್ರಿ

ನಿವೇದನೆ


ಗುರುದಕ್ಷಿಣೆ ನೀಡಲು ಹಾರಿತು ನದಿಯ ಬುಡಕ್ಕೆ ಗುಬ್ಬಿ
ಎತ್ತ ನೋಡಲ್ಲಿ ಬರೇ ಮಣ್ಣು ಕಲ್ಲು ನೆಲ
ಹಿಂದೊಮ್ಮೆ ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತಿದ್ದ ನದಿ
ಈಗ ಎಲ್ಲೆಂದರಲ್ಲಿ ಕಾಂಗ್ರೆಸ್ಸ್ ಕಳ್ಳಿಯಂತೆ ಹಬ್ಬಿದ ಕಟ್ಟಡಗಳು ಮುಟ್ಟುತ್ತಿವೆ ಮುಗಿಲ

ಆಗಿದೆ ವಾತವರಣದಲ್ಲಿ ಏರುಪೇರು
ಹರಿದಿದೆ ಓಝೋನ್ ಪದರು ಚೂರುಚೂರು
ಅಯ್ಯೋ ದೇವರೆ! ಇದೆಂತ ದುರ್ಗತಿ ಎಂದು ಕಣ್ಣು ಕೆಂಪಾಯಿತು
ತನ್ನ ಅಣ್ಣ ತಮ್ಮಂದಿರನ್ನ ಬೇರ್ಪಡಿಸಿದರಲ್ಲ ಈ ರಾಕ್ಷಸರು ಎಂದು ಹಿಡಿಶಾಪ ಹಾಕಿತು

ಮೆಲುಕು ಹಾಕಿತು, ಸೀಟಿ ಹೊಡೆಯುತ್ತ ಆಟವಾಡುತ್ತಿದ್ದ ದಿನವನ್ನ
ಕೇಳುತ್ತ ನದಿಯ ಜುಳುಜುಳು ಮಂಜುಳ ನಾದ
ಪ್ರಶ್ನೆ ಎದ್ದಿತು ಗುಬ್ಬಿಯ ಮನದಲ್ಲಿ
ಮೂಳೆ ಮಾಂಸದ ತೊಡಿಕೆಯ ಮಾನವನೇಕೆ ದಾನವನಾದ

ಬರಡು ಭೂಮಿ ಬಂಜೆತನದ ಕುರುಹು
ನದಿ ನೀರಾಗಿದೆ ರಕುತದಂತೆ ಕೆಂಪು
ಮದ ಮತ್ಸರ ಕೊಲೆ ಸುಲಿಗೆ ದರೋಡೆ
ಮರೆತಾಗಿದೆ ಗೋಧೂಳಿಯ ಕಂಪು

ಗುಬ್ಬಿ ಮೇಲೆಕೆ ಬ್ರಹ್ಮಾಸ್ತ್ರ
ಬನ್ನಿ ಆತ್ಮಾನ್ವೇಷಣೆ ಮಾಡೋಣ
ಶುದ್ಧ ಪರಿಸರ, ಆರೋಗ್ಯಭರಿತ ಜೀವನ
ಸಮಯ ಪ್ರಜ್ನೆಯಿಂದ ನಲ್ಮೆಯ ಬಾಳುವೆ ನಡೆಸೋಣ

                    -ಶಿಲ್ಪ ಶಾಸ್ತ್ರಿ


ಮುಂಗಾರು ಮಳೆ


ಮಲೆನಾಡ ಮಳೆ ಚೆಂದ ಮದುವಣಗಿತ್ತಿಯ ನಗು ಚೆಂದ
ಕಣ್ಣುಮುಚ್ಚಿ ಸುರಿಯುವ ಮುಂಗಾರು ಹಿಂಗಾರು ಸೋನೆ
ತೆಂಗಿನ ಗರಿಯ ಚಪ್ಪರ ಗೋಡೆ ತುಂಬ ಮಣ್ಣೆರಚಿ ಸಿಂಗಾರವಾಗಬಾರದೆಂದು
ಮೊದಲ ಮಳೆಯ ಮಣ್ಣ ಕಂಪು, ಕೋಗಿಲೆಯ ಕುಹೂ ತೋಟವಿಡಿ ಜೀರುಂಡೆ ಸದ್ದು

ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳ ಬರೋಬ್ಬರಿ ತಯಾರಿ
ತೆಂಗು ಕಂಗುಗಳ ಪಿಂಗಾರ ಮಳೆಗಾಲ ಸ್ವಾಗತಿಸುವ ರೀತಿ
ಭೂರಮೆಯು ನಳನಳಿಸುತಿದೆ ಹಸಿರು ಬಾಸಿಂಗ ತೊಟ್ಟು
ಕಾಲು ಸೇತುವೆ ನೀರಿನ ತೋಡು ನಯನ ಮನೋಹರ ದೃಶ್ಯ

ಕಂಬಳಿ ಸ್ಕಾರ್ಫ್ ಸ್ವೆಟರ್ ಪೆಟ್ಟಿಗೆಯಿಂದ ಹೊರಬಂತು
ಅಜ್ಜನ ಗಾಂಭೀರ್ಯ ಕವಳ ಕುಟ್ಟುತ ಹೊರಗಡೆ ಒಣ ಹಾಕಿದ ಅಡಿಕೆ ಕೊಬ್ಬರಿಯಡೆಗೆ
ಜಾಯಿಕಾಯಿ ಬಾಳೆಕಾಯಿ ಜಾಂಬ್ಳೆ ಮುರುಗಲ ಹಣ್ಣಿನ ಶೇಖರಣೆ
ಹುಳಿಸೊಪ್ಪು, ಮುಗಿದು ಹೋದ ಹಲಸಿನಕಾಯಿ ಚಿಪ್ಸಿನ ಡಬ್ಬದಿಂದ ಏನಾದರು ಹೊರಬರಬಹುದೆಂಬ ಕಾತರ

ಮಣ್ಣುಹುಳು ಏಳುತ್ತಿವೆ ಆಕ್ರಮಿಸಲು ದೀವಾರವನ್ನು
ತೆಂಗಿನ ಕತ್ತದ ಮಂಚ ಲಾಟೀನ್ ಬೆಳಕಿನ ಲಾವಂಚ
ಮಿಣುಕು ಹುಳ ಸೇರಿಕೊಂಡಿತು ಚಾದರದೊಳಗೆ
ಗುಡುಗು ಗುಮ್ಮನ ಬರುವಿಕೆಯಲ್ಲಿ ಕಾಯುತ್ತಿತ್ತು ಹೃದಯ

                    -ಶಿಲ್ಪ ಶಾಸ್ತ್ರಿ

ಕುರುಡು ಪ್ರೇಮ


’ಬೇಡ ಮಗ, ಬಿಟ್ಟಾಕು ಇದು ಇನ್ಫಾಚುಯೇಷನ್’ ಅಂದರು ಫ್ರೆಂಡ್ಸ್
ಮೂರ್ಖ ಅರಿಯಲೇ ಇಲ್ಲ ಅದರಿಂದಾಗುವ ನಷ್ಟ
ಇದು ಲವ್ ಸೈನ್ಸ್ ನನ್ನ ಅವಳ ಕೆಮಿಸ್ಟ್ರಿ ಸರಿ ಹೋಗುತ್ತದೆ ಎಂದು ಹಾಕಿದ ಗುಣಾಕಾರ ಭಾಗಕಾರ
ಹದಿಹರೆಯದ ಪ್ರೇಮ ಲೆಕ್ಕಕ್ಕಿಂತ ಕ್ಲಿಷ್ಟ

ಅವನು ಆ ಮೋಹನಾಂಗಿಯ ಬಲೆಗೆ ಬಿದ್ದ
ಚಂದ್ರವದನೆ, ತುಟಿ ದಾಳಿಂಬೆ, ಮದವೇರಿಸುವ ನಿತಂಬ
ಅವಳು ನಡೆದಾಡುವ ದಾರಿಯಲ್ಲೆಲ್ಲ ಇವ ಹೂ ಚೆಲ್ಲಿದ
ಕಣ್ಣಲ್ಲೇ ಇರಿಯುವ ನೋಟ, ರಾತ್ರಿಯಲ್ಲ ಅವಳ ಕನವರಿಕೆ

ದೇಶ ಕೋಶ ಲೆಕ್ಕಿಸದೆ ಅವಳನ್ನು ಓಡಾಡಿಸಿದ
ಹೋಟೆಲ್, ಶೊಪಿಂಗ್, ಸ್ನೂಕರ್, ಪಬ್ ಎಂದು ಹಣದ ಹೊಳೆ ಹರಿಸಿದ
ತನ್ನ ಪ್ರೀತಿ ಸಾವಿರಕ್ಕೊಂದು ಅಂದ
ರಕ್ತದಲ್ಲೇ ಪ್ರೇಮಪತ್ರ ಬರೆದ

ಅವಳು ವಿದೇಶಕ್ಕೆ ಹಾರಿದಳು ಪುರ್ರೆಂದು
ಹೈಯರ್ ಡಿಗ್ರಿ ಸಂಪಾದಿಸುವೆನೆಂದು
ಅವಳ ಲೈಫು ಅಲ್ಲೇ ಸೆಟ್ಲ್
ಇಲ್ಲಿ ಇವನಾದ ಸದಾ ಅವಳದೇ ನೆನಪಿನಲಿ ಮೆಂಟ್ಲ್

ಅದೇ ಮಧುರ ಯಾತನೆಯಲ್ಲಿ ಕೊರಗಿ ಕೊರಗಿ ’ಸುರ’ ದಾಸನಾದ
ಕುರುಚಲು ಗಡ್ಡ, ಎಣ್ಣೆ ಮುಖ ರಾತ್ರಿಯೆಲ್ಲ ಹಲುಬಿ ಹಲುಬಿ ಕಾಳಿದಾಸನಾದ
ಅಪ್ಪ ಅಮ್ಮನಿಗೆ ಬಿಸಿ ತುಪ್ಪ ತಿಂದ ಸ್ಥಿತಿ
ಪ್ರಾಯದ ಹುರುಪಿನಲ್ಲಿ ಮೈಮರೆತದ್ದರಿಂದ ಬಂದ ಅಧೋಗತಿ

ಕುರುಡು ಪ್ರೇಮ ಅವನೀಗ ಭಗ್ನ ಪ್ರೇಮಿ
ಅಂದುಕೊಂಡಿದ್ದವ ಒಂದೊಮ್ಮೆ ತಾನೊಬ್ಬ ಮಹಾನ್ ಅಮರಪ್ರೇಮಿ
ಹುಡುಗರೇ ಹುಷಾರ್! ಸದಾ ಎಚ್ಚರವಿಡಿ
ತುರ್ತು ನಿರ್ಗಮನದ ಕಡೆ ಸದಾ ಗಮನವಿಡಿ

                    -ಶಿಲ್ಪ ಶಾಸ್ತ್ರಿಕನಸು


ನನ್ನೆದೆಯ ಕನಸು
ಮಾಡಲು ಹೊರಟಿದ್ದೆ ನಾನದ ನನಸು
ಅವಳ ನೆನಪಿನ ಚಿತ್ತಾರ
ನನ್ನ ಮನದಂಗಳದಲ್ಲಿ ಹೊಸೆಯುತ್ತಿತ್ತು ಹೂದಾರ

ಆವಳ ನಡೆಯೋ ಹರಿಣದಂತೆ
ಅವಳ ಜಡೆಯೋ ನಾಗನಂತೆ
ಅವಳ ಮೈ ದಂತದಲ್ಲಿ ಕಡೆದಿಟ್ಟ ಶಿಲ್ಪ
ನೆನೆಸಿಕೊಂಡರೆ ಮೈಮನದಲ್ಲಿ ಆಗುತಿತ್ತು ಸಂಚಲನ ಅಪರೂಪ

ಇಂದು ಕೇಳೆ ಬಿಡುವೆನು ಅವಳ ಕರವನ್ನ
ಒಪ್ಪಿಕೊಳ್ಳುತ್ತಾಳೆ ಎಂಬೀ ದೃಢ ಮನ
ಏಕೆಂದರೆ ಅವಳು ಯಾವಗಲೂ ಎಸೆಯುತಿದ್ದಳಲ್ಲ ನನ್ನೆಡೆ ಹೂನಗೆಯೊಂದನ್ನ
ಅದು ತಲುಪಿಸುತಿತ್ತು ಬೇರೊಂದು ಲೋಕವನ್ನ

ಏನೆನೋ ಕನಸು ಕಂಡ ನಾನು ಅವಳ ’ಇಲ್ಲ’ ಜೀರ್ಣಿಸಿಕೊಳ್ಳಲ್ಲೇ ಇಲ್ಲ
ಮಾಡಿತ್ತಲ್ಲ ತಿರುಗದ ಹಾಗೆ ಬೇರೆಯವರ ಎದುರು ಉಬ್ಬಿದ ತಲೆ ಗಲ್ಲ
ಆದರೇನಂತೆ ನಾನು ಛಲ ಬಿಡದ ಸರದಾರ
ಪೋಣಿಸುವೆನು ಇನ್ನೊಂದು ಸುಂದರ ಕನಸಿನ ಹಂದರ

                        -ಶಿಲ್ಪ ಶಾಸ್ತ್ರಿ

ಗೀಜಗ


ಅಲ್ಲೊಂದು ತೊಟ್ಟಿಲು ಮರಕ್ಕೆ ಜೋಕಾಲಿ
ಅದರೊಳಗಿನ ಮಗು ಪಿಳಿಪಿಳಿ ಕಣ್ಣು ಬಿಡುತ್ತಿದೆ
ಮೇಲ್ಗಡೆ ಇರುವ ಗೀಜಗನ ಗೂಡು ನೋಡುತ್ತಿದೆ
ಗೀಜಗನ ಮರಿಯೆಡೆ ತನ್ನ ಪುಟ್ಟ ಕೈ ಚಾಚುತಿದೆ

ಅವೆರಡಕ್ಕೂ ಹೊಸ ಜಗತ್ತು ಹೊಸ ಪರಿಚಯ
ರೆಕ್ಕೆ ಬಲಿತು ಆಕಾಶ ತುಂಬಾ ಹಾರಾಡುವಾಸೆ
ಕಾಯುತ್ತಿವೆ ಅಮ್ಮನ ಮೊದಲ ಪಾಠಕ್ಕೆ
ಬೆಚ್ಚೆದೆಯ ಹಿತಕ್ಕೆ ಎದೆಹಾಲು ಪಾನಕ್ಕೆ

ಮನಸ್ಸು ನಿರ್ಮಲ ನಿರಾಳ ಈ ಜಗದ ಪರಿವೆಯೇ ಇಲ್ಲ
ತಮ್ಮ ಶತ್ರುಗಳಾರೆಂದು ಅರಿಯದ ಮುಗ್ಧ ಮನ
ಕೈಯಲ್ಲಿರುವ ಗಿರಿಗೀಟಿ ಸದ್ದು ಮಾಡುತ್ತಿದೆ
ಹಕ್ಕಿ ಮರಿ ತನ್ನ ಕೀರಲು ಭಾಷೆ ವ್ಯಕ್ತ ಪಡಿಸುತ್ತಿದೆ

ಪವಡಿಸು ಮಗುವೇ ಸುಖವಾಗಿ ಇನ್ನೊಂದಿಷ್ಟು ದಿನ
ಸಾಧಿಸುವುದುಂಟು ದೊಡ್ಡವನಾಗಿ ಬೇಕುಬೇಡಗಳನ್ನು
ಕಾಲ್ಗೆಜ್ಜೆಗಳ ಕಿಣಿಕಿಣಿ ನಾದ, ಹಲ್ಲುಗಳೇ ಇಲ್ಲ ಕಿಲಕಿಲ ನಗು
ಸುತ್ತಲಿನ ಪರಿಸರ ನವಸುಗಂಧ ಬೀರುತ್ತಿದೆ

                -ಶಿಲ್ಪ ಶಾಸ್ತ್ರಿ

ದು:ಸ್ವಪ್ನ


ಎದೆಯಲ್ಲಿ ಯಕ್ಷಗಾನದ ಮದ್ದಳೆ ಗಹಗಹಿಸಿ ನಕ್ಕಂತಾಗಿ
ಅಂತರಂಗ ಬಹಿರಂಗ ಒಂದೇ ಆಗಿರಲಿ ಎಂಬ ಶ್ರೀಗಳ ನುಡಿ
ಯಾರೂ ಸಾಚಾ ಅಲ್ಲ ಒಬ್ಬರು ಇನ್ನೊಬ್ಬರ ಕೊನೆ ಕಾಯುತ್ತಿದ್ದಾರೆಂಬ ಭಾಸ
ಮೈಯೆಲ್ಲಾ ಪರ ಪರ ಕೆರೆದುಕೊಂಡು ತುಂಬಿದ ಕೀವು

ದಾರಿಬದಿಯ ಕಸದತೊಟ್ಟಿಯಿಂದ ಅನ್ನದ ಅಗಳು ಕೈಗೆ ಸಿಗದೆ ಓಡುತಿದೆ
’ಕೇಳ್ರಲೆ ನಿನ್ನ ಪ್ರತಿಮೆ ಸ್ಥಾಪಿಸುತ್ತಾರಂತಪ್ಪ ರಥವೀದಿಯಲ್ಲಿ’ ಎಂದರು
ಒಂದು ಅವ್ಯಕ್ತ ಭಾವನೆ ಅವಲಕ್ಕಿ ಕುಟ್ಟಲು ಪ್ರಾರಂಭ
ಮೊನ್ನೆಯವರೆಗೆ ಪ್ರಾಣಸಖನಂತಿದ್ದವನು ತಂದು ತೋರಿಸಿದ ’ಮಂಗಳೆಯರು’ ಎಂಬ ಸರ್ಟಿಫಿಕೇಟ್

ಗೆಳತಿಯನ್ನು ಬಟ್ಟೆ ಜೋಲಿಯ ಮೇಲೆ ತೂಗುತ್ತಿದ್ದ ನೆನಪು
ಚಿಕ್ಕಪ್ಪನ ಮಗ ಮೈಯೆಲ್ಲಾ ದಡವಿ ಒಳಗೆ ಇನ್ನಷ್ಟು ಒಳಗೆ ಹೋದಂತೆ
ಮಗುವೊಂದು ಅಡ್ಡಾದಿಡ್ಡಿ ಓಡಾಡುತ್ತಿದೆ ಅಮ್ಮನ ಕೂಗುತ್ತಾ
ದೊಡ್ಡದೊಂದು ಸ್ಫೋಟವಾದ ಚಿತ್ರ ವಿಚಿತ್ರ ವೇದನೆ

ಶರೀರ ದೊಡ್ಡ ದೊಡ್ಡದಾಗಿ ರಾಕ್ಷಸಾಕಾರವಾಗಿ ಬಿಟ್ಟಿದೆ
ಹಾದರದ ಬೇಲಿಯಲ್ಲಿ ಬಟ್ಟೆ ಸಿಕ್ಕಿಹಾಕಿಕೊಂಡಂತಾಯಿತು
ಎಲ್ಲಾ ಕಡೆ ಕಾಣುತ್ತಿರುವ ಈ ಅಡೆತಡೆಗಳಿಗೆ ಸ್ಪಂದಿಸಿ ಸ್ಪಂದಿಸಿ
ದೇಹ ಕೀಲು ಮನ ಜಡ್ಡು ಹಿಡಿದು ಒಂದೇ ಸವನೆ ಬೆವರತೊಡಗಿತು

                -ಶಿಲ್ಪ ಶಾಸ್ತ್ರಿ


ಚಂದ್ರವಾಕ್ಯ


ಚಂದ್ರನ ಮದುವೆಗೆ ಹೊತ್ತು ಗೊತ್ತಾಗಿದೆ
ಬೆಳದಿಂಗಳ ರಾತ್ರಿ ಮದುವಣಗಿತ್ತಿಯಂತೆ ಸಜ್ಜಾಗಿದೆ
ತಾರೆಗಳು ಮೆರವಣಿಗೆಯಲ್ಲಿ ನಡೆದು ಬರುತ್ತಿವೆ
ಚಕೋರ ಪಕ್ಷಿ ತನ್ನ ಉಪಸ್ಥಿತಿಯನ್ನು ಸಾರಿದೆ

ಶಶಿಯು ನಭದಲ್ಲಿ ಕಪ್ಪುಬಿಳಿ ಮೋಡಗುದುರೆಯನ್ನೇರಿ ಬರುತ್ತಿದ್ದಾನೆ
ಎಂದೂ ಇಲ್ಲದ ನಗು, ತನ್ನ ಯೌವ್ವನವನ್ನು ಇಮ್ಮಡಿಗೊಳಿಸಿದ್ದಾನೆ
ಪ್ರಣಯ ಪಕ್ಷಿಗಳೆರಡು ಗುಡ್ಡದೆತ್ತರದಲ್ಲಿ ಈ ಚೆಲುವ ಸವಿಯುತ್ತಿವೆ
ಸಂಸಾರವೊಂದು ಮನೆಯ ಮಹಡಿಯ ಮೇಲೆ ಬೆಳದಿಂಗಳ ರಾತ್ರಿಯ ಫಲಾಹಾರ ಸೇವಿಸುತ್ತಿದೆ

ಗುಂಡಗಿನ ಒಬ್ಬಟ್ಟಿನಂತಿರುವ ಚಂದಿರನಲ್ಲಿ ಅಲ್ಲಲ್ಲಿ ಕಲೆಯೆಂದು ತೋರಿಸುತ್ತಿದ್ದಾನೆ ಕುಡುಕನೊಬ್ಬ
ಪರಿಪೂರ್ಣ ವ್ಯಕ್ತಿತ್ವ ಲೋಪದೋಷವಿಲ್ಲದೆ ಇರಲು ಯಾರಿಂದಾದರು ಸಾಧ್ಯವೇ?
ಈ ತಂಪು ಸದಾ ನಮ್ಮ ಜೀವನದಲ್ಲಿರಲಿ
ರಾತ್ರಿ ಸರಿದು ನಭೋಕಿರಣ ನವೋಲ್ಲಾಸ ಮೂಡುತಿದೆ

                -ಶಿಲ್ಪ ಶಾಸ್ತ್ರಿ

ಭ್ರೂಣ


ಹೆಣ್ಣು ಅಬಲೆಯಲ್ಲ
ಹೆಣ್ಣಿಲ್ಲದ ಮನೆ ಅರಮನೆಯಲ್ಲ
ದೈವೀ ಸ್ವರೂಪ ಹೆಣ್ಣು
ಅವಳ ಇರುವಿಕೆಯಿಂದ ನಾಟದು ದುಷ್ಟಶಕ್ತಿಗಳ ಕಣ್ಣು

ಪರಿಪೂರ್ಣ ಸಂಸಾರ ಅಲಂಕೃತ ಹೆಣ್ಣಿನಿಂದ
ಆನಂದ ಪರಮಾನಂದ ಬಾಳಬಹುದು ಸುಖನೆಮ್ಮದಿಯಿಂದ
ಆಕೆ ಛಲಗಾತಿ ಸಾಧಕಿ ದಿಟ್ಟೆ
ನವವಧುವಿನಿಂದ ಹಸುಗೂಸು ಹೊತ್ತುಕೊಂಡು ಓಡಾಡುವ ಹೊಟ್ಟೆ

ಮನೆ ಮಕ್ಕಳು ಮಡದಿ ಸುಖಸಂಸಾರದ ಆಗರ
ಸುಸ್ತು ಬಳಲಿ ಬೆಂಡಾಗಿ ಬಂದಾಗ ಅವಳ ಒಂದು ನಗೆ ಆಗುವುದು ಮನ ಹಗುರ
ತಾಯಿಯ ಕರುಳಕುಡಿ ಹೆಣ್ಣೆಂದರೆ ಕೊಲ್ಲುವಿರೇಕಣ್ಣ?
ಗಂಡು ಹಡೆಯಲು ಒಬ್ಬ ತಾಯಿಯೇ ಬೇಕಲ್ಲಣ್ಣ!

ಒಡಲಾಗ್ನಿ


ನೂರೊಂದು ನೆನಪುಗಳ ಹಿಡಿ ಹಿಡಿದುಕೊಂಡು ಮುಷ್ಟಿಯಲ್ಲಿ
ತಲೆಯೆಲ್ಲಿ ಹುಳ ಕಲಸುಮೇಲೋಗರವಾಗಿ
ಪ್ರೀತಿಯೇನು ವ್ಯಾಪಾರಿ ತಕ್ಕಡಿಯಲ್ಲಿ ಅಳೆದಷ್ಟು ಸುಲಭವೇ
ಹೃದಯ ಸಾರೋಟಿನಲ್ಲಿ ನಿನ್ನ ನೆನಪು ಪದೇಪದೇ ಸಾಗುವಂತಾಗಿ

ತಲ್ಲಣಿಸುತ್ತಿದೆ ಈ ಹೃದಯ ಚೂರಿ ಇರಿದಂತಹ ನೋವು
ನನ್ನ ಹೃದಯೇಶ್ವರಿ ನೀ ನನ್ನೆದೆಯಂಗಳದ ರಂಗವಲ್ಲಿ
ನನ್ನ ಕೈಯಲ್ಲಿ ಇಷ್ಟೇ ಆಗುವುದು ನಾನೊಬ್ಬ ಕಲಾಕಾರನಲ್ಲ
ನಿನ್ನ ಸದಾಕಾಲ ಸುಖವಾಗಿಡುವ ಪರಿಕಲ್ಪನೆ ತಪ್ಪಿಯೂ ಮನ ಒಪ್ಪುತ್ತಿಲ್ಲ

ರಿಂಗ್ ಮಾಸ್ಟರ್ ಹಂಟರ್ ತಿರುಗಿಸಿದಂತೆ ನೀ ಹೇಳಿದೆಲ್ಲ ಕೇಳಲು ತಯಾರಿರುವ ನಾನು
ಮೂಕ ನಟನೆ ನಿನ್ನೆದುರು ನೀನೇನೋ ಕನಸ ಕಾಣಲು ಕಾರಣ ಈ ಪಾಪಿ
ನಾನೊಬ್ಬ ಅಂತರ್ಮುಖಿ ಬಿದ್ದರೆ ಏಳುವ ಧೈರ್ಯವಿಲ್ಲ
ಭವಿಷ್ಯವೆಂದರೆ ಹೆದರಿಕೆ ವರ್ತಮಾನವೆಂದರೆ ನಡುಗುವಿಕೆ

ಪರಪುರುಷನ ತೆಕ್ಕೆಯಲ್ಲಿ ನಿನ್ನ ಒಡನಾಟ ಪ್ರೇಮಸಲ್ಲಾಪ ನಾ ಕಾಣಲಾರೆ
ನನ್ನೆದೆಯ ಕೆಸರಲ್ಲಿ ಅರಳಿದ ಕಮಲ ನೀನು
ಆದರೆ ದೂರವಿರು ನನ್ನಿಂದ ನೀ ಸುಖವಾಗಿರುವೆ
ಹಿಮಾಲಯ ತಪ್ಪಲಲ್ಲಿ ಮೋಕ್ಷ ಹೊಂದುವ ಪ್ರಯತ್ನ ಮಾಡುವೆ ನಾನು

                    -ಶಿಲ್ಪ ಶಾಸ್ತ್ರಿ


ಬೆತ್ತಲೆ ಜಗತ್ತು


ಕೆಂಪುವರ್ಣ ಹವಳದ ದ್ವೀಪ
ಹಳದಿ ನೀಲಿ ಹಸಿರು ನೂರಾರು ಬಣ್ಣಗಳು
ಎದೆ ಜಾರುವ ಸೀರೆ ತೊಡೆ ಬಟ್ಟಲು ಮಾಡಿದ ಚಣ್ಣಗಳು
ಕರೆದಿವೆ ನಿಮ್ಮನ್ನು ಬಿಸಿಯುಸಿರಿನಿಂದ ತಮ್ಮ ನಖರಾ ಶೇಲೆಯಿಂದ ನಖಶಿಖಾಂತ

ಕವಳದಿಂದ ತುಟಿಯಲ್ಲ ಕೆಂಪಾಗಿದೆ
ಎಳೆ ಹುಡುಗಿಯ ಮೊಲೆ ಚೂಪಾಗಿದೆ
ಗಯ್ಯಾಳಿ ಒಡತಿ ದೂಡುತಿದ್ದಾಳೆ ಕತ್ತಲೆ ಕೋಣೆಯೊಳಗೆ
ಸಣ್ಣದೊಂದು ದೀಪ ದುಡ್ಡು ಸುರಿಸುವ ಹಣತೆ

ಅವನ ಗಡ್ಡ ಚುಚ್ಚುತಿದೆ ಪಲಕದ ಒಳಗಿನ ಎದೆ
ಸುಡುತಿದೆ ನೋವು ನಿಷ್ಕರುಣೆ ಪಾಪಿ ಯಮಯಾತನೆ
ಹೊರಗಡೆ ಚಂದ್ರ ಇನ್ನಷ್ಟು ಸುಂದರವಾಗಿದ್ದಾನೆ
ಸುಖ ವೇಳೆ ಸವೆಸಿದಷ್ಟೂ ದಿನಗೂಲಿ ಇಲ್ಲದಿದ್ದರೆ ಒಂದು ತುತ್ತಿಗೂ ತಾತ್ವಾರ

ಸುಂದರ ಸಿನೇ ನಾಯಕರ ನೆನಪಿನ ಬುತ್ತಿ ಹೃದಯದಲ್ಲಿ
ಅದರಲ್ಲೇ ಮಿಶ್ರಿತ ಸ್ವರ್ಗ ನರಕ ಮನ ತಿಳಿನೀರಿನ ಝರಿ
ಬಿದ್ದಾಗಿದೆ ಹಗಲು ಕಂಡ ಬಾವಿಗೆ
ಕರಿ ಬಿಳಿ ಮುಗಿಲುಗಳ ಸಮಾಗಮ

                -ಶಿಲ್ಪ ಶಾಸ್ತ್ರಿ

ಅಪ್ಸರ


ಅಪ್ಸರಾ! ಹೆಸರಿಗೆ ತಕ್ಕಂತೆ ಅವಳು ದಂತದ ಬೊಂಬೆ
ನೀಲವೇಣಿ ಹರಿಣಾಕ್ಷಿ
ನಾಟ್ಯಮಯೂರಿ ಬೆಡಗಿನ ವೈಯ್ಯಾರಿ
ಬೇಲೂರಿನ ಶಿಲಾಬಾಲಿಕೆಗೆ ಸೆಡ್ದು ಹೊಡೆಯುತ್ತಿದ್ದಳು

ತಾನು ದೊಡ್ಡ ನಾಯಕಿಯಾಗಬೇಕೆಂಬ ಆಸೆ
ಆದರೆ ಬಡತನವೆಂಬ ರಾಕ್ಷಸನ ತಡೆ
ಅದೃಷ್ಟ ಕೆಲವೊಮ್ಮೆ ಒದ್ದು ಬರುತದಂತೆ
ಅವಳ ಯೋಗ! ಹೇಗೋ ಹೆಸರಾಂತ ಚಿತ್ರಗಳು ಅವಳ ಪಾಲು

ಸಾವಿರಾರು ಪದಕ, ಪುರಸ್ಕಾರ, ಪ್ರಶಸ್ತಿ ಸೇರಿದವು ಮಡಿಗೆ
ಸೊಕ್ಕು ಅಹಂಕಾರ ಮದ ಸೇರಿದವು ಮುಡಿಗೆ!
ನಾಯಿ ಮುಟ್ಟಿದ ಮಡಿಕೆಯಾಯಿತು ಜೀವನ
ಆಫೀಮು, ಕುಡಿತ, ಸಿಗರೇಟುಗಳೇ ಆದವು ಜೀವ ತುಂಬುವ ಚೇತನ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಆಕಾಶಕ್ಕೇರಿದ ಕೀರ್ತಿ ಆಶೆ ಆಕಾಂಕ್ಷೆಗಳೆಲ್ಲ ನುಚ್ಚುನೂರು
ಬದುಕಾಯಿತು ಮೂರಾಬಟ್ಟೆ
ಅವಳ ಜೀವನ ಈಗ ಬೀದಿಯಲ್ಲಿ ತಿರುಗುವ ನಾಯಿಪಾಡು

ಯಾರದೋ ಪುಣ್ಯ, ಸೇರಿದಳು "ಅರುಣೋದಯ"
ಕುಳಿತಿದ್ದಾಳೆ ನೋಡುತ ದಿಗಂತ
ಹೊಡೆಯುತಿದೆ ಮುಖಕ್ಕೆ ಇನ್ನೊಂದಿಷ್ಟು ದಿನ ಬದುಕುವೆನೆಂಬ ಆಶಾಕಿರಣ
ಮನದಲ್ಲಿ ತುಟಿಯಲ್ಲಿ ಮೂಡಿತು ಎಷ್ಟೋ ದಿನದ ನಂತರ ಮಂದಹಾಸ

                        -ಶಿಲ್ಪ ಶಾಸ್ತ್ರಿ

ಅನೀರ್ವಚನೀಯ


ಹೊಸಧಕ್ಕೆಯ ಬಳಿ ಕೂತು ಆಲೋಚಿಸುತ್ತಿದ್ದೆ
ಯಾಕೀ ಜೀವನ ಬಟ್ಟೆ ಊಟದ ಬವಣೆ
ಕೆಲವೊಂದು ಅವಶ್ಯಕತೆಗಳು ಇಲ್ಲದಿದ್ದರೆ
ಅಲ್ಲೇ ನನ್ನ ಸಾಮ್ರಾಜ್ಯ ಸ್ಥಾಪಿಸುತ್ತಿದ್ದೆನೇನೋ

ಅಜ್ಜನ ಊರು ಮನೆ ಕೊಟ್ಟಿಗೆ ಬೇಣ
ಮೈಯಲೆಲ್ಲಾ ತರುತ್ತಿತ್ತು ಹೊಸ ಹುರುಪು
ಬೇಗೆ ಬೆಂದು ಬಸವಳಿದ ಜೀವಕ್ಕೆ
ನಾಲ್ಕು ದಿನದ ನೆಮ್ಮದಿಯ ಸೌಭಾಗ್ಯ ಸೂಟಿ ದಿನಗಳಲ್ಲಿ

ಅಜ್ಜ ವಿಧಿವಶನಾದನೆಂದು ಸುದ್ದಿ ಬಂದಾಗ
ಹತ್ತಿಕ್ಕಲಾಗಲ್ಲಿಲ್ಲ ದು:ಖ ದುಗುಡ ದುಮ್ಮಾನ
ಎಲ್ಲ ಕಾಲಾತೀತ ಪ್ರಶ್ನೆ ಕಾಣದ ದೇವರ ಕೈವಾಡ
ಪುನರಪಿ ಮರಣಂ ಪುನರಪಿ ಜನನಂ ಎನ್ನುತ್ತಾರಲ್ಲ

ವಾಪಸು ಹೊರಟಾಗ ಅಜ್ಜ ಕೊಡುತ್ತಿದ್ದ ನೂರು ರುಪಾಯಿ ಆಸೆ
ಅಜ್ಜ ಶೇವಿಂಗ್ ಮಾಡುವಾಗಲೆಲ್ಲ ಪಕ್ಕದಲ್ಲಿ ಊರುತ್ತಿದ್ದೆವು ನಮ್ಮ ಅಂಡು
ಕವಳ ಕುಟ್ಟುವ ಅಜ್ಜನ ಚಾಕಚಕ್ಯತೆ ಪರೀಕ್ಷಿಸಲು ಹೋಗಿ ಜಜ್ಜಿಕೊಂಡ ಬೆರಳು
ಚಿಕ್ಕು ಮರದ ಎತ್ತರ ಕಮ್ಮಿ ಎಂದು ಹತ್ತಿ ಕೆಂಪು ಇರುವೆ ದೌಡು ಮೈತುಂಬ

ದಿನವಿಡೀ ತೋಟ ಬೇಣ ಎಂದು ಪುಟಪುಟನೆ ತಿರುಗಾಡುತ್ತಿದ್ದ ಅಜ್ಜ
ದೇವರ ಪೂಜೆ, ಅನ್ನದ ನೈವೇದ್ಯ ಸುಮಾರು ಒಂದು ಗಂಟೆ ಸರಿಹೊತ್ತಿನಲಿ ಹೊಟ್ಟೆಗೆ ಸುಖ
ಎಮ್ಮೆ ಬೆಣ್ಣೆ ಅಚ್ಚ ಬಿಳಿ, ನೀರು ಬೆಲ್ಲದ ಪಾಕ ಕೈತುಂಬ
ಅಜ್ಜಿ ಹೇಳುತ್ತಿದ್ದ ಸಹಸ್ರನಾಮದ ಗುನುಗು ಮನೆತುಂಬ

ಅಜ್ಜ ಪಂಪ್ಸೆಟ್ ಮನೆಗೆ ಹೋದಾಗಲೆಲ್ಲ ಹಿಂಬಾಲಿಸುತ್ತಿದ್ದ ಸೈನಿಕರು
ಕೈಯಲ್ಲೊಂದು ಕೋಲು ಕಾಲಲ್ಲಿ ಅಡಿಕೆಯ ಚಪ್ಪಲ್
ಸುಗ್ಗಿಗೌಡನ ಬುಡದಲ್ಲೇ ಧ್ಯಾನಮಗ್ನ
ಗಲ್ಲದ ಮೇಲೊಂದು ಕೈಯೂರಿ ಕಿವಿಯಲ್ಲ ಮೈಯಾಗಿಸಿಕೊಳ್ಳುತ್ತಿದ್ದೆವು

ಮಾಣಿಭಟ್ಟ, ಗೇರು ಬೀಜ, ಹಲಸಿನ ಬೇಳೆ ಅಜ್ಜ ತಂದುಕೊಡುತ್ತಿದ್ದ
ಅದನ್ನು ತಿಂದು ತೃಪ್ತಿಯಾಗಿ ತೇಗುತ್ತಿದ್ದೆವು
ಅಜ್ಜಿ ಕಾಲಮೇಲೆ ಮಲಗುವುದೆಂದರೆ ಅಮೃತ ಕುಡಿದಷ್ಟು ಪ್ರೀತಿ
ಅವಳ ಮೃದು ಹಿತವಾದ ಕೈಗಳ ಜಾದೂ ಜಾರಿಸುತ್ತಿತ್ತು ನಿದ್ರೆಗೆ

ಬೇಣಕ್ಕೆ ಹೋದಾಗಲೆಲ್ಲ ಅಜ್ಜನ ಆಸ್ತಿಯ ಪರಿಧಿ ಎಷ್ಟು ದೂರವೆಂದು
ಮನದಲ್ಲಿ ಏಳುತ್ತಿತ್ತೊಂದು ವಿಚಾರ
ಮಾಮರದ ಗೆಲ್ಲುಗಳೇ ನಮ್ಮ ಕೈ ಜೋಕಾಲಿ
ಪಕ್ಕದವರ ಹಿತ್ತಲನ್ನೂ ಸೇರಿಸಿಕೊಂಡು ತಾಳೆ ಹಾಕುತ್ತಿದ್ದೆವು

ಚೆಲುವು ನೋಡಲು, ಅಜ್ಜ ಹಾಕುತ್ತಿದ್ದಾಗ ಸಸ್ಯಗಳಿಗೆಲ್ಲ ನೀರು ಪೈಪಿನಿಂದ
ಮುಂದೆ ದೊಡ್ಡ ಮಾಲಿಯಾಗಿ ಇದೇ ಗಾಂಭೀರ್ಯದಲ್ಲಿ ತಿರುಗುತ್ತೇನೆಂಬ ಹಸುಳೆ ಮನ
ಮನೆಯಲ್ಲ ತೇಗ ಬೀಟೆಯ ಹೊಗೆಯ ಸುವಾಸನೆ
ಚಟ್ನಿ ಸಾಂಬಾರ್ ಕಡೆಯುತ್ತಿದ್ದ ಕಲ್ಲಿಗೆ ಸೇರಿಸುತ್ತಿದ್ದೆ ನನ್ನದೊಂದು ಕೈಯ

ಅಜ್ಜನ ಮನೆತುಂಬ ಹುಚ್ಚುನಾಯಿಯಂತೆ ಅಲೆಯುತ್ತಿದ್ದ ನಾವು
ಈಗೇನೇನೋ ನೀರವ ಮೌನ
ಕವಳ ಕುಟ್ಟುವ, ತೆಂಗಿನ ಕಾಯಿ ಅಟ್ಟಕ್ಕೆ ಸೇರಿಸುವ,
ಅಜ್ಜ ಆಳುಗಳಿಗೆ ಕೂ ಹಾಕುವ ಸೌಂಡು ಕಿವಿಯಲ್ಲಿ ಶಬ್ದಿಸುತಿವೆ

                    -ಶಿಲ್ಪ ಶಾಸ್ತ್ರಿ

ಬಾಲ್ಯ


ಮಾಮಿಡಿ ಚೈತ್ರದ ಸೋನೆ
ಚೆಲುವ ಚಿತ್ತಾರ ಬಾಯಾರಿದರು ತೀರದ ಉತ್ಸಾಹ
ಮುಗ್ಧತೆ ಮನದಲ್ಲಿ ತುಂಟತನ ತುಟಿಯಲ್ಲಿ
ಆಲದ ಬೀಳಿನ ಜೋಕಾಲಿ ಅಲ್ಲಿ ಇಲ್ಲಿ ಜಿಗಿಯುವ ಚಿಗರೆ ಮರಿಗಳು

ಎಪ್ರಿಲ್ ಮೇ ಬಂತೆಂದರೆ ಅಭ್ಯಾಸಕ್ಕೆ ಜೈ
ಹನುಮಂತನ ಬಾಲ ಏರಿಕೇರಿ ಎಲ್ಲೆಲ್ಲೂ ಪೋರರದೇ ಸೈ
ಮರದ ಕತ್ತಿ ಗುರಾಣಿ ಅದೇನೋ ಆವೇಶ ಪರಾಕ್ರಮ
ಮರಳಲ್ಲಿ ಮನೆಕಟ್ಟು ಗುಲಗಂಜಿಯ ಸರ ಪೋಣಿಸು

ನದಿಯ ದಡ ಕಡಲ ತೀರ ತಿರುಗಿದ್ದು ಗೊತ್ತಾದರೆ
ಅಪ್ಪನಿಂದ ಕಣ್ಣು ಉರಿ ಬೆದರಿಕೆ ಬೆನ್ನ ಮೇಲೆ ಹೊಡೆತ
ಕದ್ದು ಮುಚ್ಚಿ ಪೆಪ್ಸಿ ತಿಂದು ಬಾಯೆಲ್ಲ ಕೆಂಪು
ಮಾವಿನ ಪಚಡಿ ಕಿಕ್ ಕೊಡುತ್ತಿತ್ತು ಉಪ್ಪು ಖಾರ ಅರಶಿನ

ಹಿರಿಯರೆಲ್ಲ ಅವರವರದೇ ಯೋಚನೆ ವಿಚಾರ ಚಾಡಿ ಹೊಟ್ಟೆಯುರಿಸಿಕೊಳ್ಳುತ್ತಿದ್ದರೆ
ಕರಂಜಿಕಾಯಿ ಮರಹತ್ತು, ಸುರಂಜಿ ಹೂವನ್ನ ಕಿತ್ತುಕೊಡುತ್ತಿದ್ದ ತಮ್ಮ
ಪುಂಡು ಪೋಕರಿಯ ಪರಮಾವಧಿ
ಸೌತೆ ಬಳ್ಳಿ ಬಿಂಬುಳಿ ಅಮಟೆ ಕಾಯಿಗಳೇ ಮಧ್ಯಾಹ್ನದ ಪರಮ್ಮಾನ್ನ

ಸಂಜೆಯವರೆಗೂ ಮೈಕೈಯೆಲ್ಲಾ ಕೆಂಪುಕಪ್ಪು ಧೂಳು
ಸಮುದ್ರದ ಮೊರೆತ ಸಗಣಿ ಹಾಕಿದ ಅಂಗಳ ದಿಟ್ಟ ದೃಷ್ಟಿ ಆಕಾಶದಲ್ಲಿ
ಶುರುವಾಗುತ್ತಿತ್ತು ಮಗ್ಗಿ ಹರಟೆ ಭಜನಾಮಂಡಳಿ
ದಣಿದಿದ್ದ ದೇಹಕ್ಕೆ ಒಂದು ಪರಿ ಸುಖ ಸಂತೃಪ್ತಿ

ಬಾಲ್ಯದ ದಿನಗಳ ನೆನಪುಗಳೇ ಮಧುರ
ಎದೆಯಲ್ಲಿ ಎನೋ ಒಂದು ಪ್ರೀತಿ ದೂರಾದ ಭಾವನೆ
ಕಾಲಕ್ಕೆ ತಕ್ಕಂತೆ ಹೊಂದುಕೊಳ್ಳುವವರು ನಾವು
ಬೆಳದಿಂಗಳು ಪಸರಿಸಿದ ರಾತ್ರಿ ಕಳೆದು ತಿಳಿಹಗಲಾಯಿತು

                            -ಶಿಲ್ಪ ಶಾಸ್ತ್ರಿಅಂತ:ಕರಣ


ಯೋಜನೆಗಳು ನೂರಾರು ರೂಪುರೇಷೆಗೊಳ್ಳುತ್ತಿದ್ದವು
ನನ್ನೀ ಅಂತರ್ಪಟಲದಲ್ಲಿ ಭವಿಷ್ಯದ ಬಗ್ಗೆ
ನಿನ್ನೆ ಇಂದು ನಾಳೆಗಳ ಸಂಧಾನದಲ್ಲಿ
ಮನೆ ಖರೀದಿಸಲಾ ಮದುವೆಯಾಗಲಾ
ಎಂಬ ತುಮುತುಮು ತಳಮಳ

ಮನದಲ್ಲಿ ಏನಂದುಕೊಳ್ಳುತ್ತೀಯೋ ಅದನ್ನು ಇಂದೇ ಮಾಡಿ ಮುಗಿಸು ಅನ್ನುವ ಹಿರಿಯರು
ಅದು ಸಾಧ್ಯವಾ ಅದನ್ನು ಹೇಗೆ ಸಾಧಿಸಲಿ ಎಂದು ಚಿಂತಿಸುವ ಕಿರಿಯರು

ಹುಚ್ಚುಗುದುರೆಯಂತೆ ಮನವೆಲ್ಲೆಲ್ಲೋ ಓಡುತಿದೆ
ಈ ಕಾಂಪಿಟೀಷನ್ ವರ್ಡ್ಲ್ ನಲ್ಲಿ ಬದುಕುವುದು ಹೇಗೆ?
ಓ! ದೇವರೇ ಯೋಗ, ಡೋಗ, ಮೌನವ್ರತ ಎಲ್ಲಾ ಸಾಧಿಸಲು ಹೆಣಗುತ್ತಿರುವ ನಾನು
ದಯವಿಟ್ಟು ಒಂದು ಚೂರು ಮನ:ಶಾಂತಿ ಕೊಡು ಗುರುವೇ

                    -ಶಿಲ್ಪ ಶಾಸ್ತ್ರಿ