ಮಾಮಿಡಿ ಚೈತ್ರದ ಸೋನೆ
ಚೆಲುವ ಚಿತ್ತಾರ ಬಾಯಾರಿದರು ತೀರದ ಉತ್ಸಾಹ
ಮುಗ್ಧತೆ ಮನದಲ್ಲಿ ತುಂಟತನ ತುಟಿಯಲ್ಲಿ
ಆಲದ ಬೀಳಿನ ಜೋಕಾಲಿ ಅಲ್ಲಿ ಇಲ್ಲಿ ಜಿಗಿಯುವ ಚಿಗರೆ ಮರಿಗಳು
ಎಪ್ರಿಲ್ ಮೇ ಬಂತೆಂದರೆ ಅಭ್ಯಾಸಕ್ಕೆ ಜೈ
ಹನುಮಂತನ ಬಾಲ ಏರಿಕೇರಿ ಎಲ್ಲೆಲ್ಲೂ ಪೋರರದೇ ಸೈ
ಮರದ ಕತ್ತಿ ಗುರಾಣಿ ಅದೇನೋ ಆವೇಶ ಪರಾಕ್ರಮ
ಮರಳಲ್ಲಿ ಮನೆಕಟ್ಟು ಗುಲಗಂಜಿಯ ಸರ ಪೋಣಿಸು
ನದಿಯ ದಡ ಕಡಲ ತೀರ ತಿರುಗಿದ್ದು ಗೊತ್ತಾದರೆ
ಅಪ್ಪನಿಂದ ಕಣ್ಣು ಉರಿ ಬೆದರಿಕೆ ಬೆನ್ನ ಮೇಲೆ ಹೊಡೆತ
ಕದ್ದು ಮುಚ್ಚಿ ಪೆಪ್ಸಿ ತಿಂದು ಬಾಯೆಲ್ಲ ಕೆಂಪು
ಮಾವಿನ ಪಚಡಿ ಕಿಕ್ ಕೊಡುತ್ತಿತ್ತು ಉಪ್ಪು ಖಾರ ಅರಶಿನ
ಹಿರಿಯರೆಲ್ಲ ಅವರವರದೇ ಯೋಚನೆ ವಿಚಾರ ಚಾಡಿ ಹೊಟ್ಟೆಯುರಿಸಿಕೊಳ್ಳುತ್ತಿದ್ದರೆ
ಕರಂಜಿಕಾಯಿ ಮರಹತ್ತು, ಸುರಂಜಿ ಹೂವನ್ನ ಕಿತ್ತುಕೊಡುತ್ತಿದ್ದ ತಮ್ಮ
ಪುಂಡು ಪೋಕರಿಯ ಪರಮಾವಧಿ
ಸೌತೆ ಬಳ್ಳಿ ಬಿಂಬುಳಿ ಅಮಟೆ ಕಾಯಿಗಳೇ ಮಧ್ಯಾಹ್ನದ ಪರಮ್ಮಾನ್ನ
ಸಂಜೆಯವರೆಗೂ ಮೈಕೈಯೆಲ್ಲಾ ಕೆಂಪುಕಪ್ಪು ಧೂಳು
ಸಮುದ್ರದ ಮೊರೆತ ಸಗಣಿ ಹಾಕಿದ ಅಂಗಳ ದಿಟ್ಟ ದೃಷ್ಟಿ ಆಕಾಶದಲ್ಲಿ
ಶುರುವಾಗುತ್ತಿತ್ತು ಮಗ್ಗಿ ಹರಟೆ ಭಜನಾಮಂಡಳಿ
ದಣಿದಿದ್ದ ದೇಹಕ್ಕೆ ಒಂದು ಪರಿ ಸುಖ ಸಂತೃಪ್ತಿ
ಬಾಲ್ಯದ ದಿನಗಳ ನೆನಪುಗಳೇ ಮಧುರ
ಎದೆಯಲ್ಲಿ ಎನೋ ಒಂದು ಪ್ರೀತಿ ದೂರಾದ ಭಾವನೆ
ಕಾಲಕ್ಕೆ ತಕ್ಕಂತೆ ಹೊಂದುಕೊಳ್ಳುವವರು ನಾವು
ಬೆಳದಿಂಗಳು ಪಸರಿಸಿದ ರಾತ್ರಿ ಕಳೆದು ತಿಳಿಹಗಲಾಯಿತು
-ಶಿಲ್ಪ ಶಾಸ್ತ್ರಿ
No comments:
Post a Comment