Monday, 16 April 2012

ಅಪ್ಸರ


ಅಪ್ಸರಾ! ಹೆಸರಿಗೆ ತಕ್ಕಂತೆ ಅವಳು ದಂತದ ಬೊಂಬೆ
ನೀಲವೇಣಿ ಹರಿಣಾಕ್ಷಿ
ನಾಟ್ಯಮಯೂರಿ ಬೆಡಗಿನ ವೈಯ್ಯಾರಿ
ಬೇಲೂರಿನ ಶಿಲಾಬಾಲಿಕೆಗೆ ಸೆಡ್ದು ಹೊಡೆಯುತ್ತಿದ್ದಳು

ತಾನು ದೊಡ್ಡ ನಾಯಕಿಯಾಗಬೇಕೆಂಬ ಆಸೆ
ಆದರೆ ಬಡತನವೆಂಬ ರಾಕ್ಷಸನ ತಡೆ
ಅದೃಷ್ಟ ಕೆಲವೊಮ್ಮೆ ಒದ್ದು ಬರುತದಂತೆ
ಅವಳ ಯೋಗ! ಹೇಗೋ ಹೆಸರಾಂತ ಚಿತ್ರಗಳು ಅವಳ ಪಾಲು

ಸಾವಿರಾರು ಪದಕ, ಪುರಸ್ಕಾರ, ಪ್ರಶಸ್ತಿ ಸೇರಿದವು ಮಡಿಗೆ
ಸೊಕ್ಕು ಅಹಂಕಾರ ಮದ ಸೇರಿದವು ಮುಡಿಗೆ!
ನಾಯಿ ಮುಟ್ಟಿದ ಮಡಿಕೆಯಾಯಿತು ಜೀವನ
ಆಫೀಮು, ಕುಡಿತ, ಸಿಗರೇಟುಗಳೇ ಆದವು ಜೀವ ತುಂಬುವ ಚೇತನ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಆಕಾಶಕ್ಕೇರಿದ ಕೀರ್ತಿ ಆಶೆ ಆಕಾಂಕ್ಷೆಗಳೆಲ್ಲ ನುಚ್ಚುನೂರು
ಬದುಕಾಯಿತು ಮೂರಾಬಟ್ಟೆ
ಅವಳ ಜೀವನ ಈಗ ಬೀದಿಯಲ್ಲಿ ತಿರುಗುವ ನಾಯಿಪಾಡು

ಯಾರದೋ ಪುಣ್ಯ, ಸೇರಿದಳು "ಅರುಣೋದಯ"
ಕುಳಿತಿದ್ದಾಳೆ ನೋಡುತ ದಿಗಂತ
ಹೊಡೆಯುತಿದೆ ಮುಖಕ್ಕೆ ಇನ್ನೊಂದಿಷ್ಟು ದಿನ ಬದುಕುವೆನೆಂಬ ಆಶಾಕಿರಣ
ಮನದಲ್ಲಿ ತುಟಿಯಲ್ಲಿ ಮೂಡಿತು ಎಷ್ಟೋ ದಿನದ ನಂತರ ಮಂದಹಾಸ

                        -ಶಿಲ್ಪ ಶಾಸ್ತ್ರಿ

No comments:

Post a Comment