Monday, 16 April 2012

ಅನೀರ್ವಚನೀಯ


ಹೊಸಧಕ್ಕೆಯ ಬಳಿ ಕೂತು ಆಲೋಚಿಸುತ್ತಿದ್ದೆ
ಯಾಕೀ ಜೀವನ ಬಟ್ಟೆ ಊಟದ ಬವಣೆ
ಕೆಲವೊಂದು ಅವಶ್ಯಕತೆಗಳು ಇಲ್ಲದಿದ್ದರೆ
ಅಲ್ಲೇ ನನ್ನ ಸಾಮ್ರಾಜ್ಯ ಸ್ಥಾಪಿಸುತ್ತಿದ್ದೆನೇನೋ

ಅಜ್ಜನ ಊರು ಮನೆ ಕೊಟ್ಟಿಗೆ ಬೇಣ
ಮೈಯಲೆಲ್ಲಾ ತರುತ್ತಿತ್ತು ಹೊಸ ಹುರುಪು
ಬೇಗೆ ಬೆಂದು ಬಸವಳಿದ ಜೀವಕ್ಕೆ
ನಾಲ್ಕು ದಿನದ ನೆಮ್ಮದಿಯ ಸೌಭಾಗ್ಯ ಸೂಟಿ ದಿನಗಳಲ್ಲಿ

ಅಜ್ಜ ವಿಧಿವಶನಾದನೆಂದು ಸುದ್ದಿ ಬಂದಾಗ
ಹತ್ತಿಕ್ಕಲಾಗಲ್ಲಿಲ್ಲ ದು:ಖ ದುಗುಡ ದುಮ್ಮಾನ
ಎಲ್ಲ ಕಾಲಾತೀತ ಪ್ರಶ್ನೆ ಕಾಣದ ದೇವರ ಕೈವಾಡ
ಪುನರಪಿ ಮರಣಂ ಪುನರಪಿ ಜನನಂ ಎನ್ನುತ್ತಾರಲ್ಲ

ವಾಪಸು ಹೊರಟಾಗ ಅಜ್ಜ ಕೊಡುತ್ತಿದ್ದ ನೂರು ರುಪಾಯಿ ಆಸೆ
ಅಜ್ಜ ಶೇವಿಂಗ್ ಮಾಡುವಾಗಲೆಲ್ಲ ಪಕ್ಕದಲ್ಲಿ ಊರುತ್ತಿದ್ದೆವು ನಮ್ಮ ಅಂಡು
ಕವಳ ಕುಟ್ಟುವ ಅಜ್ಜನ ಚಾಕಚಕ್ಯತೆ ಪರೀಕ್ಷಿಸಲು ಹೋಗಿ ಜಜ್ಜಿಕೊಂಡ ಬೆರಳು
ಚಿಕ್ಕು ಮರದ ಎತ್ತರ ಕಮ್ಮಿ ಎಂದು ಹತ್ತಿ ಕೆಂಪು ಇರುವೆ ದೌಡು ಮೈತುಂಬ

ದಿನವಿಡೀ ತೋಟ ಬೇಣ ಎಂದು ಪುಟಪುಟನೆ ತಿರುಗಾಡುತ್ತಿದ್ದ ಅಜ್ಜ
ದೇವರ ಪೂಜೆ, ಅನ್ನದ ನೈವೇದ್ಯ ಸುಮಾರು ಒಂದು ಗಂಟೆ ಸರಿಹೊತ್ತಿನಲಿ ಹೊಟ್ಟೆಗೆ ಸುಖ
ಎಮ್ಮೆ ಬೆಣ್ಣೆ ಅಚ್ಚ ಬಿಳಿ, ನೀರು ಬೆಲ್ಲದ ಪಾಕ ಕೈತುಂಬ
ಅಜ್ಜಿ ಹೇಳುತ್ತಿದ್ದ ಸಹಸ್ರನಾಮದ ಗುನುಗು ಮನೆತುಂಬ

ಅಜ್ಜ ಪಂಪ್ಸೆಟ್ ಮನೆಗೆ ಹೋದಾಗಲೆಲ್ಲ ಹಿಂಬಾಲಿಸುತ್ತಿದ್ದ ಸೈನಿಕರು
ಕೈಯಲ್ಲೊಂದು ಕೋಲು ಕಾಲಲ್ಲಿ ಅಡಿಕೆಯ ಚಪ್ಪಲ್
ಸುಗ್ಗಿಗೌಡನ ಬುಡದಲ್ಲೇ ಧ್ಯಾನಮಗ್ನ
ಗಲ್ಲದ ಮೇಲೊಂದು ಕೈಯೂರಿ ಕಿವಿಯಲ್ಲ ಮೈಯಾಗಿಸಿಕೊಳ್ಳುತ್ತಿದ್ದೆವು

ಮಾಣಿಭಟ್ಟ, ಗೇರು ಬೀಜ, ಹಲಸಿನ ಬೇಳೆ ಅಜ್ಜ ತಂದುಕೊಡುತ್ತಿದ್ದ
ಅದನ್ನು ತಿಂದು ತೃಪ್ತಿಯಾಗಿ ತೇಗುತ್ತಿದ್ದೆವು
ಅಜ್ಜಿ ಕಾಲಮೇಲೆ ಮಲಗುವುದೆಂದರೆ ಅಮೃತ ಕುಡಿದಷ್ಟು ಪ್ರೀತಿ
ಅವಳ ಮೃದು ಹಿತವಾದ ಕೈಗಳ ಜಾದೂ ಜಾರಿಸುತ್ತಿತ್ತು ನಿದ್ರೆಗೆ

ಬೇಣಕ್ಕೆ ಹೋದಾಗಲೆಲ್ಲ ಅಜ್ಜನ ಆಸ್ತಿಯ ಪರಿಧಿ ಎಷ್ಟು ದೂರವೆಂದು
ಮನದಲ್ಲಿ ಏಳುತ್ತಿತ್ತೊಂದು ವಿಚಾರ
ಮಾಮರದ ಗೆಲ್ಲುಗಳೇ ನಮ್ಮ ಕೈ ಜೋಕಾಲಿ
ಪಕ್ಕದವರ ಹಿತ್ತಲನ್ನೂ ಸೇರಿಸಿಕೊಂಡು ತಾಳೆ ಹಾಕುತ್ತಿದ್ದೆವು

ಚೆಲುವು ನೋಡಲು, ಅಜ್ಜ ಹಾಕುತ್ತಿದ್ದಾಗ ಸಸ್ಯಗಳಿಗೆಲ್ಲ ನೀರು ಪೈಪಿನಿಂದ
ಮುಂದೆ ದೊಡ್ಡ ಮಾಲಿಯಾಗಿ ಇದೇ ಗಾಂಭೀರ್ಯದಲ್ಲಿ ತಿರುಗುತ್ತೇನೆಂಬ ಹಸುಳೆ ಮನ
ಮನೆಯಲ್ಲ ತೇಗ ಬೀಟೆಯ ಹೊಗೆಯ ಸುವಾಸನೆ
ಚಟ್ನಿ ಸಾಂಬಾರ್ ಕಡೆಯುತ್ತಿದ್ದ ಕಲ್ಲಿಗೆ ಸೇರಿಸುತ್ತಿದ್ದೆ ನನ್ನದೊಂದು ಕೈಯ

ಅಜ್ಜನ ಮನೆತುಂಬ ಹುಚ್ಚುನಾಯಿಯಂತೆ ಅಲೆಯುತ್ತಿದ್ದ ನಾವು
ಈಗೇನೇನೋ ನೀರವ ಮೌನ
ಕವಳ ಕುಟ್ಟುವ, ತೆಂಗಿನ ಕಾಯಿ ಅಟ್ಟಕ್ಕೆ ಸೇರಿಸುವ,
ಅಜ್ಜ ಆಳುಗಳಿಗೆ ಕೂ ಹಾಕುವ ಸೌಂಡು ಕಿವಿಯಲ್ಲಿ ಶಬ್ದಿಸುತಿವೆ

                    -ಶಿಲ್ಪ ಶಾಸ್ತ್ರಿ
ಅವನಿ - ಮಾಸ ಪತ್ರಿಕೆ 
ಪ್ರಕಟಣೆ ದಿನಾಂಕ - 15-06-2018

No comments:

Post a Comment