’ಬೇಡ ಮಗ, ಬಿಟ್ಟಾಕು ಇದು ಇನ್ಫಾಚುಯೇಷನ್’ ಅಂದರು ಫ್ರೆಂಡ್ಸ್
ಮೂರ್ಖ ಅರಿಯಲೇ ಇಲ್ಲ ಅದರಿಂದಾಗುವ ನಷ್ಟ
ಇದು ಲವ್ ಸೈನ್ಸ್ ನನ್ನ ಅವಳ ಕೆಮಿಸ್ಟ್ರಿ ಸರಿ ಹೋಗುತ್ತದೆ ಎಂದು ಹಾಕಿದ ಗುಣಾಕಾರ ಭಾಗಕಾರ
ಹದಿಹರೆಯದ ಪ್ರೇಮ ಲೆಕ್ಕಕ್ಕಿಂತ ಕ್ಲಿಷ್ಟ
ಅವನು ಆ ಮೋಹನಾಂಗಿಯ ಬಲೆಗೆ ಬಿದ್ದ
ಚಂದ್ರವದನೆ, ತುಟಿ ದಾಳಿಂಬೆ, ಮದವೇರಿಸುವ ನಿತಂಬ
ಅವಳು ನಡೆದಾಡುವ ದಾರಿಯಲ್ಲೆಲ್ಲ ಇವ ಹೂ ಚೆಲ್ಲಿದ
ಕಣ್ಣಲ್ಲೇ ಇರಿಯುವ ನೋಟ, ರಾತ್ರಿಯಲ್ಲ ಅವಳ ಕನವರಿಕೆ
ದೇಶ ಕೋಶ ಲೆಕ್ಕಿಸದೆ ಅವಳನ್ನು ಓಡಾಡಿಸಿದ
ಹೋಟೆಲ್, ಶೊಪಿಂಗ್, ಸ್ನೂಕರ್, ಪಬ್ ಎಂದು ಹಣದ ಹೊಳೆ ಹರಿಸಿದ
ತನ್ನ ಪ್ರೀತಿ ಸಾವಿರಕ್ಕೊಂದು ಅಂದ
ರಕ್ತದಲ್ಲೇ ಪ್ರೇಮಪತ್ರ ಬರೆದ
ಅವಳು ವಿದೇಶಕ್ಕೆ ಹಾರಿದಳು ಪುರ್ರೆಂದು
ಹೈಯರ್ ಡಿಗ್ರಿ ಸಂಪಾದಿಸುವೆನೆಂದು
ಅವಳ ಲೈಫು ಅಲ್ಲೇ ಸೆಟ್ಲ್
ಇಲ್ಲಿ ಇವನಾದ ಸದಾ ಅವಳದೇ ನೆನಪಿನಲಿ ಮೆಂಟ್ಲ್
ಅದೇ ಮಧುರ ಯಾತನೆಯಲ್ಲಿ ಕೊರಗಿ ಕೊರಗಿ ’ಸುರ’ ದಾಸನಾದ
ಕುರುಚಲು ಗಡ್ಡ, ಎಣ್ಣೆ ಮುಖ ರಾತ್ರಿಯೆಲ್ಲ ಹಲುಬಿ ಹಲುಬಿ ಕಾಳಿದಾಸನಾದ
ಅಪ್ಪ ಅಮ್ಮನಿಗೆ ಬಿಸಿ ತುಪ್ಪ ತಿಂದ ಸ್ಥಿತಿ
ಪ್ರಾಯದ ಹುರುಪಿನಲ್ಲಿ ಮೈಮರೆತದ್ದರಿಂದ ಬಂದ ಅಧೋಗತಿ
ಕುರುಡು ಪ್ರೇಮ ಅವನೀಗ ಭಗ್ನ ಪ್ರೇಮಿ
ಅಂದುಕೊಂಡಿದ್ದವ ಒಂದೊಮ್ಮೆ ತಾನೊಬ್ಬ ಮಹಾನ್ ಅಮರಪ್ರೇಮಿ
ಹುಡುಗರೇ ಹುಷಾರ್! ಸದಾ ಎಚ್ಚರವಿಡಿ
ತುರ್ತು ನಿರ್ಗಮನದ ಕಡೆ ಸದಾ ಗಮನವಿಡಿ
-ಶಿಲ್ಪ ಶಾಸ್ತ್ರಿ
No comments:
Post a Comment