Monday, 16 April 2012

ಗೀಜಗ


ಅಲ್ಲೊಂದು ತೊಟ್ಟಿಲು ಮರಕ್ಕೆ ಜೋಕಾಲಿ
ಅದರೊಳಗಿನ ಮಗು ಪಿಳಿಪಿಳಿ ಕಣ್ಣು ಬಿಡುತ್ತಿದೆ
ಮೇಲ್ಗಡೆ ಇರುವ ಗೀಜಗನ ಗೂಡು ನೋಡುತ್ತಿದೆ
ಗೀಜಗನ ಮರಿಯೆಡೆ ತನ್ನ ಪುಟ್ಟ ಕೈ ಚಾಚುತಿದೆ

ಅವೆರಡಕ್ಕೂ ಹೊಸ ಜಗತ್ತು ಹೊಸ ಪರಿಚಯ
ರೆಕ್ಕೆ ಬಲಿತು ಆಕಾಶ ತುಂಬಾ ಹಾರಾಡುವಾಸೆ
ಕಾಯುತ್ತಿವೆ ಅಮ್ಮನ ಮೊದಲ ಪಾಠಕ್ಕೆ
ಬೆಚ್ಚೆದೆಯ ಹಿತಕ್ಕೆ ಎದೆಹಾಲು ಪಾನಕ್ಕೆ

ಮನಸ್ಸು ನಿರ್ಮಲ ನಿರಾಳ ಈ ಜಗದ ಪರಿವೆಯೇ ಇಲ್ಲ
ತಮ್ಮ ಶತ್ರುಗಳಾರೆಂದು ಅರಿಯದ ಮುಗ್ಧ ಮನ
ಕೈಯಲ್ಲಿರುವ ಗಿರಿಗೀಟಿ ಸದ್ದು ಮಾಡುತ್ತಿದೆ
ಹಕ್ಕಿ ಮರಿ ತನ್ನ ಕೀರಲು ಭಾಷೆ ವ್ಯಕ್ತ ಪಡಿಸುತ್ತಿದೆ

ಪವಡಿಸು ಮಗುವೇ ಸುಖವಾಗಿ ಇನ್ನೊಂದಿಷ್ಟು ದಿನ
ಸಾಧಿಸುವುದುಂಟು ದೊಡ್ಡವನಾಗಿ ಬೇಕುಬೇಡಗಳನ್ನು
ಕಾಲ್ಗೆಜ್ಜೆಗಳ ಕಿಣಿಕಿಣಿ ನಾದ, ಹಲ್ಲುಗಳೇ ಇಲ್ಲ ಕಿಲಕಿಲ ನಗು
ಸುತ್ತಲಿನ ಪರಿಸರ ನವಸುಗಂಧ ಬೀರುತ್ತಿದೆ

                -ಶಿಲ್ಪ ಶಾಸ್ತ್ರಿ

No comments:

Post a Comment