ಮಲೆನಾಡ ಮಳೆ ಚೆಂದ ಮದುವಣಗಿತ್ತಿಯ ನಗು ಚೆಂದ
ಕಣ್ಣುಮುಚ್ಚಿ ಸುರಿಯುವ ಮುಂಗಾರು ಹಿಂಗಾರು ಸೋನೆ
ತೆಂಗಿನ ಗರಿಯ ಚಪ್ಪರ ಗೋಡೆ ತುಂಬ ಮಣ್ಣೆರಚಿ ಸಿಂಗಾರವಾಗಬಾರದೆಂದು
ಮೊದಲ ಮಳೆಯ ಮಣ್ಣ ಕಂಪು, ಕೋಗಿಲೆಯ ಕುಹೂ ತೋಟವಿಡಿ ಜೀರುಂಡೆ ಸದ್ದು
ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳ ಬರೋಬ್ಬರಿ ತಯಾರಿ
ತೆಂಗು ಕಂಗುಗಳ ಪಿಂಗಾರ ಮಳೆಗಾಲ ಸ್ವಾಗತಿಸುವ ರೀತಿ
ಭೂರಮೆಯು ನಳನಳಿಸುತಿದೆ ಹಸಿರು ಬಾಸಿಂಗ ತೊಟ್ಟು
ಕಾಲು ಸೇತುವೆ ನೀರಿನ ತೋಡು ನಯನ ಮನೋಹರ ದೃಶ್ಯ
ಕಂಬಳಿ ಸ್ಕಾರ್ಫ್ ಸ್ವೆಟರ್ ಪೆಟ್ಟಿಗೆಯಿಂದ ಹೊರಬಂತು
ಅಜ್ಜನ ಗಾಂಭೀರ್ಯ ಕವಳ ಕುಟ್ಟುತ ಹೊರಗಡೆ ಒಣ ಹಾಕಿದ ಅಡಿಕೆ ಕೊಬ್ಬರಿಯಡೆಗೆ
ಜಾಯಿಕಾಯಿ ಬಾಳೆಕಾಯಿ ಜಾಂಬ್ಳೆ ಮುರುಗಲ ಹಣ್ಣಿನ ಶೇಖರಣೆ
ಹುಳಿಸೊಪ್ಪು, ಮುಗಿದು ಹೋದ ಹಲಸಿನಕಾಯಿ ಚಿಪ್ಸಿನ ಡಬ್ಬದಿಂದ ಏನಾದರು ಹೊರಬರಬಹುದೆಂಬ ಕಾತರ
ಮಣ್ಣುಹುಳು ಏಳುತ್ತಿವೆ ಆಕ್ರಮಿಸಲು ದೀವಾರವನ್ನು
ತೆಂಗಿನ ಕತ್ತದ ಮಂಚ ಲಾಟೀನ್ ಬೆಳಕಿನ ಲಾವಂಚ
ಮಿಣುಕು ಹುಳ ಸೇರಿಕೊಂಡಿತು ಚಾದರದೊಳಗೆ
ಗುಡುಗು ಗುಮ್ಮನ ಬರುವಿಕೆಯಲ್ಲಿ ಕಾಯುತ್ತಿತ್ತು ಹೃದಯ
-ಶಿಲ್ಪ ಶಾಸ್ತ್ರಿ
No comments:
Post a Comment