ಎದೆಯಲ್ಲಿ ಯಕ್ಷಗಾನದ ಮದ್ದಳೆ ಗಹಗಹಿಸಿ ನಕ್ಕಂತಾಗಿ
ಅಂತರಂಗ ಬಹಿರಂಗ ಒಂದೇ ಆಗಿರಲಿ ಎಂಬ ಶ್ರೀಗಳ ನುಡಿ
ಯಾರೂ ಸಾಚಾ ಅಲ್ಲ ಒಬ್ಬರು ಇನ್ನೊಬ್ಬರ ಕೊನೆ ಕಾಯುತ್ತಿದ್ದಾರೆಂಬ ಭಾಸ
ಮೈಯೆಲ್ಲಾ ಪರ ಪರ ಕೆರೆದುಕೊಂಡು ತುಂಬಿದ ಕೀವು
ದಾರಿಬದಿಯ ಕಸದತೊಟ್ಟಿಯಿಂದ ಅನ್ನದ ಅಗಳು ಕೈಗೆ ಸಿಗದೆ ಓಡುತಿದೆ
’ಕೇಳ್ರಲೆ ನಿನ್ನ ಪ್ರತಿಮೆ ಸ್ಥಾಪಿಸುತ್ತಾರಂತಪ್ಪ ರಥವೀದಿಯಲ್ಲಿ’ ಎಂದರು
ಒಂದು ಅವ್ಯಕ್ತ ಭಾವನೆ ಅವಲಕ್ಕಿ ಕುಟ್ಟಲು ಪ್ರಾರಂಭ
ಮೊನ್ನೆಯವರೆಗೆ ಪ್ರಾಣಸಖನಂತಿದ್ದವನು ತಂದು ತೋರಿಸಿದ ’ಮಂಗಳೆಯರು’ ಎಂಬ ಸರ್ಟಿಫಿಕೇಟ್
ಗೆಳತಿಯನ್ನು ಬಟ್ಟೆ ಜೋಲಿಯ ಮೇಲೆ ತೂಗುತ್ತಿದ್ದ ನೆನಪು
ಚಿಕ್ಕಪ್ಪನ ಮಗ ಮೈಯೆಲ್ಲಾ ದಡವಿ ಒಳಗೆ ಇನ್ನಷ್ಟು ಒಳಗೆ ಹೋದಂತೆ
ಮಗುವೊಂದು ಅಡ್ಡಾದಿಡ್ಡಿ ಓಡಾಡುತ್ತಿದೆ ಅಮ್ಮನ ಕೂಗುತ್ತಾ
ದೊಡ್ಡದೊಂದು ಸ್ಫೋಟವಾದ ಚಿತ್ರ ವಿಚಿತ್ರ ವೇದನೆ
ಶರೀರ ದೊಡ್ಡ ದೊಡ್ಡದಾಗಿ ರಾಕ್ಷಸಾಕಾರವಾಗಿ ಬಿಟ್ಟಿದೆ
ಹಾದರದ ಬೇಲಿಯಲ್ಲಿ ಬಟ್ಟೆ ಸಿಕ್ಕಿಹಾಕಿಕೊಂಡಂತಾಯಿತು
ಎಲ್ಲಾ ಕಡೆ ಕಾಣುತ್ತಿರುವ ಈ ಅಡೆತಡೆಗಳಿಗೆ ಸ್ಪಂದಿಸಿ ಸ್ಪಂದಿಸಿ
ದೇಹ ಕೀಲು ಮನ ಜಡ್ಡು ಹಿಡಿದು ಒಂದೇ ಸವನೆ ಬೆವರತೊಡಗಿತು
-ಶಿಲ್ಪ ಶಾಸ್ತ್ರಿ
No comments:
Post a Comment