Monday, 16 April 2012

ರಾಜಠೀವಿ


ಸಂಡಾಸು ಮಾಡಲು ಕುಕ್ಕರು ಬಡಿದ ಡೊಂಗ್ರನಿಗೆ
ತಲೆಯೆಲ್ಲಾ ತುಂಬಿದ ಆಲೋಚನೆ
ಮೊನ್ನೆ ಮೊನ್ನೆ ಶಹರದಲ್ಲಿ ನೋಡಿದ ಅರಮನೆ
ದೇವೇಂದ್ರನಿರುವ ಸ್ವರ್ಗಕ್ಕೇನು ಕಮ್ಮಿ ಇಲ್ಲ

ಅಮ್ಮನ ಕೈಯ ಒಣರೊಟ್ಟಿ ತಂಗಿಯ ರಚ್ಚೆ ಹಿಡಿದ ಅಳು
ಸುತ್ತ ಸದಾ ಸಿಂಬಳ ಸುರಿಸುತ್ತ ಚಡ್ಡಿ ಮೇಲೆರಿಸುತ್ತ ಓಡಾಡುವ ಚಿಣ್ಣರು
ಅಂದು ಟೊಂಕ್ಯನಿಗೆ ಕಸಹೆಕ್ಕುವಾಗ ಸಿಕ್ಕಿದ ಬಾರ್ಬಿ ಡಾರ್ಲಿಂಗ್
ಅನೇಕರ ಕಣ್ಣಿಗೆ ಕೈಗೆ ಸಿಗದ ಹುಳಿ ದ್ರಾಕ್ಷಿಯಾಗಿದ್ದಳು

ಒಮ್ಮೆ ತಿರುಗಿ ತನ್ನ ಜೋಪಡಿಯಡೆ ನೋಡಿದ ಕಣ್ಣು ಕೀರಲಿಸಿಕೊಂಡು
ಅದೂ ವೈಟ್ ಹೌಸಿನಂತೆ ಕಂಡಿತು ಕಣ್ಣಿಗೆ
ಮರದ ಗೊಂಬೆಯೊಂದು ಕೀರಲು ಸದ್ದು ಮಾಡದೆ ಮುರಿದು ನಿಂತಿದೆ
ಹಾಳಾಗಿ ಎಸೆದ ಅರಮನೆ ಆಟದ ಸೆಟ್ಟು, ತನ್ನನ್ನೇ ರಾಜನಂತೆ ಕಲ್ಪಿಸಿಕೊಂಡ

ಬಹೀರ್ದೆಶೆ ಮುಗಿಸಿ ಯಾಂತ್ರಿಕವಾಗಿ ಕುಳಿತ ಮುರಿದ ಮದುವೆ ಕುರ್ಚಿಯ ಮೇಲೆ
ಅನಿಸುತ್ತಿತ್ತು ತನ್ನ ಸ್ವಯಂವರ ನಡೆಯುತಿದೆ ಸುತ್ತಲೂ ಚಾಮರ ಸೇವೆ
ಕುಂಟ ನಾಯಿಯೊಂದು ಕುಳಿತ್ತಿತ್ತು ಭಕ್ತಿಭಾವದಲ್ಲಿ ಒಡೆಯನ ಎದುರು
ತನ್ನ ವಾಹನವದೆಂದು ತಾನು ಈ ಭೂಮಿಯ ಅಧಿಪತಿಯೆಂಬಂತೆ ಭಾಸವಾಯಿತು

ತನ್ನ ಕಾಲನೆತ್ತಿ ಮೂತ್ರವೆಸೆದು ಸುತ್ತ ಪರಿಧಿಯನ್ನು ರಚಿಸುತ್ತಿದ್ದ ನಾಯನ್ನು ಕಂಡು
ತನ್ನ ರಾಜ್ಯ ಇನ್ನಷ್ಟು ಬಲವಾಗುತ್ತಿದೆಯಂಬ ಧೈರ್ಯ ಮನದಲ್ಲಿ
ನೂರಾರು ಆಳುಗಳು ತನ್ನ ಸುತ್ತಮುತ್ತ ರಕ್ಷಣೆಗೆ
ತಾನೇ ದೊಡ್ಡ ಪರಾಕ್ರಮಿಯೆಂದು ತಿಳಿದು ಇಲಿ ಹೆಗ್ಗಣಗಳ ಕಡೆ ನೋಡಿದ

ಅನಾರಕಲಿಯೊಂದು ಕಮ್ಮಿ ಅದಕ್ಕೇನಂತೆ ಪಕ್ಕದ ಬೀದಿಯ ಕುಮ್ಮಿಯನ್ನು
ಕೇಳೆ ಬಿಡುವೆನು ತನ್ನ ರಾಣಿಯಾಗೆಂದು
"ಸುಬಹ್ ಸೇ ಕಹಾಂ ಪೆ ಹೈ ಬೇ ತೂ"
ಎಂದು ಮಗನ ಕಂಡ ಖುಷಿಯಲ್ಲಿ ಅಮ್ಮ ಬೆನ್ನಮೇಲೆ ರಪರಪ ಬಾರಿಸಿದಳು

                    -ಶಿಲ್ಪ ಶಾಸ್ತ್ರಿ


No comments:

Post a Comment