Tuesday, 7 August 2018

ಗಂಡು ನೋಡುವ ವೇಳೆ (ಗೊಡ್ಡು ಹರಟೆ)

'ಶ್ಯಾಂಭಟ್ರ ಮಗ್ಳು ವಿಷ ಕುಡಿಜಡೆ. ಗೊತ್ತಾತ್ತನೆ?' ಎಂದು ಗಂಟಲು ಹರಿದು ಹೋಗುವ ಹಾಗೆ ಅರಚುತ್ತಾ ಪಕ್ಕದ ಮನೆಯ ಗಿರಿಜಕ್ಕ ನಮ್ಮ ಮನೆ ಗೇಟನ್ನು ದಢಾರೆಂದು ದೂಡಿಕೊಂಡು ಒಳ ನುಗ್ಗಿದರು. ಅಮ್ಮ ಮತ್ತು ಅಜ್ಜಿ ಮನೆಯ ಹಜಾರದಲ್ಲಿ ಹಸಿ ಶೇಂಗಾ ಬಿಡಿಸುತ್ತ ಕುಳಿತಿದ್ದವರು ಒಮ್ಮೆಲೇ ಕಕ್ಕಾಬಿಕ್ಕಿಯಾಗಿ ಗಿರಿಜಕ್ಕನ ಕಡೆಗೆ ತಿರುಗಿದರು. ಅಜ್ಜಿ 'ಎಂತಾತಡೆ ಅದ್ಕೆ. ದಷ್ಟ ಪುಷ್ಟವಾಗಿ ಬೆಳ್ಕಂಡು ಇತ್ತಲೆ ಅದು' ಎಂದು ಧ್ವನಿ ಏರಿಸಿದರು. ಅಮ್ಮ ತಾವೂ ಕಮ್ಮಿ ಇಲ್ಲವೆಂದು 'ಎಂತಾದ್ರೂ ಲವ್ವು ಗಿವ್ವು ಮಾಡ್ಕಂಡಿಕ್ಕು. ಎಲ್ಲೋ ಕೈಕೊಟ್ನಾ ಹೇಳಿ ಪುಣ್ಯಾತ್ಮ' ಎಂದು ಉರಿವ ಬೆಂಕಿಗೆ ತುಪ್ಪ ಸೇರಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಗಿರಿಜಕ್ಕ 'ಹೌದಡೆ , ಮದ್ವೆ ಮಾಡಿಕಂಬುಲೆ ತಯಾರು ಇಲ್ಲ್ಯಡ ಮಾಣಿ. ಆದ್ರೆ ಹೊಟ್ಟೇಲಿ ಅವಂದೇ ಮಗು ಬೆಳಿತಾ ಇತ್ತು ಹೇಳಿ ಜನ ಆಡ್ಕತ್ತ ಇದ್ದ' ಅಂದರು.
'ಹೌದನೇ ಈ ಹೆಣ್ಮಕ್ಕಳೇ ಹೀಂಗೆ. ಅಪ್ಪ ಅಮ್ಮ ತಲೆ ತಗ್ಸ್ಕಂಡು ತಿರುಗುವಾಂಗೆ ಮಾಡಿದ್ವಲೇ. ಒಂದು ಚೂರು ಜವಾಬ್ದಾರಿ ಬೇಡದ' ಅಂದು ಸಿಡುಕಿದರು ಅಮ್ಮ. ಗಿರಿಜಕ್ಕ ತಮ್ಮ ಸುದ್ದಿ ಮುಂದುವರೆಸುತ್ತ 'ಮಗು ಸತ್ತೋಜಡ ವಿಷದ ಹೊಡ್ತಕ್ಕೆ. ಪಾಪ. ಎಂತ ದುರದೃಷ್ಟ ನೋಡು ಅದ್ರದ್ದು' ಅಂದು ಲೊಚಗುಟ್ಟಿದರು.
ಜನ ಇಂತಹ ಗುಲ್ಲು ಮಾತನ್ನ ಒಂದು ಚೂರು ಸುಳಿವು ಸಿಕ್ಕುದರೂ ಸಾಕು ದೊಡ್ಡದು ಮಾಡುತ್ತಾರೆ.

ಮನೆ ಎದುರಿನ ಅಂಗಳದಲ್ಲಿ ಹಾಕಿದ ತೂಗುಯ್ಯಾಲೆಯಲ್ಲಿ ಕುಳಿತು ಈ ಭಾವಾತಿರೇಕ ಮಾತುಕತೆ ನೋಡುತ್ತಿದ್ದ ನನ್ನ ಕಡೆ ತಿರುಗಿ ಅಮ್ಮ 'ನಿಂಗು ಯಾರಾದ್ರೂ ಇದ್ರೆ ಈಗ್ಲೇ ಹೇಳೇ. ನಾಳೆ ಮದೀ ಟೈಂಅಲ್ಲಿ ಹೇಳುದಲ್ಲ' ಅಂದರು. ಅವರ ಮಾತಿಗೇನು ಸ್ಪಂದಿಸದೆ ಪೇರಳೆ ಹಣ್ಣು ತಿನ್ನುತ್ತಿದ್ದ ನನ್ನನ್ನು ನೋಡಿ ಅಜ್ಜಿ 'ನಂಗಳ ಮನೆ ಮಕ್ಕೋ ಎಲ್ಲಾ ಒಳ್ಳೆಯವೇ. ಹಾಂಗೆಲ್ಲ ಭಾನಗಡಿ ಮಾಡಕಂಬವು ಅಲ್ದಪ್ಪ. ಛಲೋ ಸಂಸ್ಕಾರ, ರೀತಿ ನೀತಿ, ನಡತೆ, ಗುಣ ಎಲ್ಲಾ ಕಲ್ಸಿ ಕೊಟ್ಟಿದ್ವಲ' ಎಂದು ಬಾಯೆಳೆದರು.
ಗಿರಿಜಕ್ಕ ಅಜ್ಜಿ ಮಾತಿಗೆ ಹೌದೆಂದು ತಲೆ ಹಾಕಿದರೂ ಅಮ್ಮ ಮಾತ್ರ ನನ್ನೆಡೆಗೆ ಸಂಶಯದಲ್ಲಿ ನೋಡುತ್ತಾ ಶೇಂಗಾ ಕುಟ್ಟುತ್ತಿದ್ದರು.

ನಾನು ನನ್ನ ಕಣ್ಣನ್ನು ಅಲ್ಲಿಂದ ಕಿತ್ತು ಎಡಬದಿಯ ಅಡಿಕೆ ತೋಟದ ಕಡೆಗೆ ಹರಿಸಿದೆ. ಎಲ್ಲೆಂದರಲ್ಲಿ ಹಸಿರು ಹೂವು ಹಣ್ಣು ಕಾಯಿ ತುಂಬಿಕೊಂಡಿರುವ ಆ ಸುಂದರ ನೋಟ ಮನಸ್ಸಿನ ತಳಮಳಕ್ಕೆ ಒಂದು ರೀತಿ ಶಾಂತಿ ಕೊಟ್ಟಿತು. ನಮ್ಮ ಮನೆಯನ್ನು ಹಿಡಿದು ಒಂದು ಹತ್ತು ಹದಿನೈದು ಮನೆಗಳು ಸಾಲಾಗಿ ಒಂದರ ಪಕ್ಕಕ್ಕೆ ಒಂದರಂತೆ ನಿಂತಿದ್ದವು. ಎದುರಿಗೆ ಅವರವರ ಭಾಗದ ತೋಟ. ಎಲ್ಲಾರು ಬಂಧು ಬಾಂಧವರೆ. ಇವಿಷ್ಟೂ ಮನೆಗಳು ಒಂದು ಕಡೆ ಅಗಲವಾದ ಕಿರು ರಸ್ತೆ ಮತ್ತೊಂದು ಕಡೆ ಸಣ್ಣದಾದ ನೀರಿನ ಹರಿವಿನಿಂದ ಬೇರ್ಪಟ್ಟಿದವು. ಹಾಗಾಗೀ ಇಲ್ಲಿಗೆ ಸಣ್ಣಕೇರಿ ಎಂಬ ಹೆಸರು ಬಂದಿತ್ತು. ಅಲ್ಲದೇ ಇಡೀ ಊರು ಸಣ್ಣದಾಗಿದ್ದರಿಂದ ಒಬ್ರ ಮನೆ ಕಥೆ ಇನ್ನೊಬ್ರಿಗೆ ಹೂಸು ವಾಸನೆ ಅಂತೆ ಹರಡುತ್ತಿತ್ತು .

ಅಷ್ಟು ಹೊತ್ತಿಗೆ ಅಂದಷ್ಟೇ ಬಾಂಬೆಯಿಂದ ಬಂದಿಳಿದು ಮಹಡಿ ಕೋಣೆಯಲ್ಲಿ ಮಲಗಿದ್ದ ನನ್ನ ಅಪ್ಪನ ತಂಗಿ, ಮಾಲತತ್ತೆ 'ಎಂತದೇ ನಿಂಗಳದ್ದು ಗಲಾಟಿ. ಯಾರಾದ್ರೂ ಸತ್ತ್ವ ಎಂಥಾದ್ದು' ಅನ್ನುತ್ತಾ ಕೆಳಗಿಳಿದರು. ಗಿರಿಜಕ್ಕ ಅವರೆಡೆಗೆ ನೋಡುತ್ತಾ 'ಶ್ರುತಿ ಸಾಯುಲೆ ಹೋಗಿತ್ತಡ. ಲವ್ ಕೇಸು. ಬೆಂಗಳೂರಲ್ಲಿ ಯಾವ್ದೋ ಮಾರ್ವಾಡಿ ಜತೆ ತಿರಗ್ತಿತ್ತಡ. ಹೊಟ್ಟೇಲಿ ಅವ್ನ ಪ್ರಸಾದ ಬೆಳೆತಿತ್ತು ಹೇಳಿ ಸುದ್ದಿ' ಅಂದರು. ಮಾಲತತ್ತೆ 'ಥೋ ಮಾರಾಯ್ತಿ. ಅದ್ರ ಅಕ್ಕ ಸೌಮ್ಯನೂ ಅಪ್ಪನ ಮನಿಗೆ ಬಂದು ಕೂತ್ಕಂಜಡ. ಹೌದಾ?' ಎಂದು ಕೇಳಿ ನನ್ನೆಡೆಗೆ ತಿರುಗಿ 'ಒಂದು ಚೂರು ಚಾ ತಾರೆ. ಹದಿನೆಂಟು ತಾಸು ಬಸ್ಸಲ್ಲಿ ಕೂತು ತಲೆ ನೋವ್ವು ಬಂಜು' ಅಂದರು. 'ಈಗ ನಂಗಳಲ್ಲೂ ಡೈವೋರ್ಸ್ ಜಾಸ್ತಿ ಆಜಡೆ . ಹುಡ್ಗನಿಗೆ ಹುಡ್ಗಿಗೆ ತಾಳಮೇಳನೇ ಸರಿ ಬತ್ತಿಲ್ಲೆ. ಗಂಡಂದೊಂದು ವಿಚಾರ ಆದ್ರೆ ಹೆಂಡ್ತಿ ತಲೇಲಿ ಇನ್ನೊಂದು ನಡೀತು . ಒಬ್ರಿಗೊಬ್ರು ಸಂಸಾರ ತೂಗಕಂಡು ಹೋಪುಲೆ ಆಯ್ತಿಲ್ಲೆ' ಅಂದ ಗಿರಿಜಕ್ಕ 'ನಂಗೂ ಚಾ ಮಾಡೇ' ಎಂದು ಕರ್ಕಶ ಧ್ವನಿಯಲ್ಲಿ ಕಿರುಚಿದರು.
ಅಲ್ಲಿಗೆ ಸೌಮ್ಯಳ ಕಥೆ ಮುಗಿದು ಇಡೀ ಮನುಕುಲದ ಬೈದಾಟ ಶುರುವಾಯಿತು.

ನಾನು ಚಾ ತಟ್ಟೆ ಹಿಡಿದುಕೊಂಡು ಹೊರ ಬರುವಾಗ 'ಮೊನ್ನೆ ಶ್ರೀದೇವಕ್ಕನ ಮಗಳು ಲಕ್ಷ್ಮೀ ಮದ್ವೆ ಹಿಂದಿನ ದಿವ್ಸ ತಂಗೆ ಈ ಮದಿ ಬೇಡ. ನಾ ಆಫೀಸಲ್ಲೇ ಒಬ್ನ ಇಷ್ಟಪಟ್ಟಿದ್ದೆ. ಮದ್ವೆ ಆದ್ರೆ ಅವ್ನೆಯ ಹೇಳಿ ರಾದ್ಧಾಂತ ಮಾಡಿ ಮನೆಯವಕ್ಕೋಕ್ಕೆಲ್ಲ ಹಾರ್ಟು ಫೇಲ್ ಆಗುದೊಂದು ಬಾಕಿ ಇತ್ತಡ. ಕೊನೆಗೆ ಶ್ರೀದೇವಕ್ಕನ ತಮ್ಮ ಎಲ್ಲರಿಗೂ ಫೋನ್ ಮಾಡಿ ಮದ್ವೆ ನಡೆತ್ತಿಲ್ಲೆ ಅಂದ. ಎಷ್ಟು ಖರ್ಚು, ಅವಮಾನ ದುಃಖ ಅಲ್ದಾ' ಎಂದು ಗಿರಿಜಕ್ಕ ಪಿಸುಗುಡುತ್ತಿದ್ದರು. ಅಮ್ಮ ನನ್ನ ಕಡೆ ನೋಡಿ 'ನೀ ಯಾರನ್ನು ಹುಡ್ಕಂಜಿಲ್ಲೆ ಅಲದನೆ. ಯಾರಾದ್ರೂ ಇದ್ರೆ ಇವತ್ತೇ ಹೇಳು. ನಾಳೆ ಗಂಡಿನ ಕಡೆಯವು ಬಂದಾಗ ಗೊತ್ತಾಪ್ಪುದು ಬೇಡ ' ಎಂದು ಮತ್ತೆ ತಮ್ಮ ವರಾತ ಪ್ರಾರಂಭಿಸಿದರು.
ಲಕ್ಷ್ಮೀ ನನ್ನ ಮ್ಯೂಚುಯಲ್ ಫ್ರೆಂಡ್ ಆದ್ದದ್ದರಿಂದ ಅವಳ ಮದುವೆ ಮುರಿದ ವಿಚಾರ ನನಗೆ ಮೊದಲೇ ಗೊತ್ತಿತ್ತು.
ಕೆಲವೊಮ್ಮೆ ಮಾಡರ್ನ್ ಯುಗದವರಾದ ನಾವು ತುಂಬಾ ಛೂಸಿ ಆಗಿಬಿಟ್ಟಿದೆವೇನೋ ಅನಿಸುತ್ತದೆ. ಇಂಜಿನಿಯರ್ ಬೇಕು. ಕೈತುಂಬಾ ಹಣ ಕಾರು ಮನೆ ಇರಬೇಕು. ಹುಡುಗ ಫಾರಿನ್ ಅಲ್ಲಿ ಇದ್ದಾನೆ ಅಂದರೆ ಮತ್ತಷ್ಟು ಖುಷಿ. ಹುಡುಗಿ ಬೆಳ್ಳಗೆ ತೆಳ್ಳಗೆ ಇರಬೇಕು. ಹಲ್ಲು ಮುಂದಿರಬಾರದು. ಕೂದಲು ಹೋಗಿ ತಲೆ ಬೋಳಿರಬಾರದು. ಕಣ್ಣು ಕಾಲು ಸರಿ ಇರಬೇಕು. ತುಂಬಾ ಫಾರ್ವಡ್ ಇದ್ದರೂ ಕಷ್ಟ ಅಥವಾ ಬೆಪ್ಪುತಕ್ಕಡಿ ತರಹ ಇದ್ದರೂ ಕಷ್ಟ. ಬರೇ ಹುಡುಗನ್ನೊಬ್ಬನೇ ಅಥವಾ ತಂದೆ ತಾಯಿಯೊಬ್ಬರೇ ಮಾತನಾಡಿದರೆ ಅದೊಂದು ರೀತಿಯ ಅಸಮಾಧಾನ. ಹೀಗೆ ನೂರಾಎಂಟು ನೆಪಗಳು.

ತಮ್ಮ ಚಾದ ಒಂದು ಗುಟುಕನ್ನು ಸರ್ರೆಂದು ಎಳೆದು ಮಾಲತತ್ತೆ 'ನಮ್ಮನಿ ಪ್ರಸಾದನ ಎರಡು ಫ್ರೆಂಡ್ಸಗಳ್ಳದ್ದು ಕೋರ್ಟಿಗೆ ಹೋಜಡ ವಿಷ್ಯ' ಅಂದರು. ಅಜ್ಜಿ 'ಹೌದನೇ ಎಂತಕ್ಕಡ' ಎಂದು ಕುತೂಹಲದಿಂದ ಕೇಳಿದಾಗ 'ಒಬ್ಬವನ ಹೆಂಡ್ತಿ ತಂಗೆ ಅಂವ ಹೊಡಿತಾ ಬಡಿತಾ. ಮೈಕೈಗೆ ಬರೇ ಹಾಕಿದ್ದಾ. ಕುಂತಲ್ಲಿ ನಿಂತಲ್ಲಿ ತನ್ನ ಪ್ರಶ್ನೆ ಮಾಡ್ತಾ. ಅತ್ತೇನು ತಂಗೆ ಯಾರೋ ಇದ್ದೋ ಹೇಳಿ ಹಳಿತರು. ತಂಗೆ ಇಬ್ರು ಸೇರಿ ತಲೆ ಕೆಡ್ಸಿದ್ದೋ. ತನ್ನ ಲೈಫು ಹಾಳಾತು ಇವ್ನ ಮದ್ವೆ ಆಗಿ ಹೇಳಿ ಕಂಪ್ಲೈನ್ಟ್ ಕೊಟ್ಟಿದ್ಲು. ಇನ್ನೊಬವ್ನ ಹೆಂಡ್ತಿ ರಾಶಿ ಕಲ್ತದ್ದು. ತಿಂಗಳಿಗೇ ಒಂದು ಲಕ್ಷ ಸಂಬಳ ಬತ್ತಡ ಅದ್ಕೆ. ತನ್ನ ಎಲ್ಲೂ ಕರ್ಕಂಡು ಹೋಗ್ತ್ನಿಲ್ಲೆ. ಬರೇ ಮನೆ ಮನೆ ಅಪ್ಪ ಅಮ್ಮನ ನೋಡ್ಕೋ ಹೇಳ್ತಾ ಹೇಳಿ ಸಿಟ್ಟಡ. ಅಬಾರ್ಷನ್ ಮಾಡ್ಕಂಜು ಹೇಳಿನೂ ಹೇಳ್ತಿದ್ದ.' ಅಂದು ವ್ಯಥಿಸಿದರು.
ಎಲ್ಲಾ ಕಾಲದಲ್ಲೂ ಈ ಗುದ್ದಾಟ ಇದ್ದದ್ದೇ ಆದರೂ ಅದು ಹೇಗೆ ಹಳಬರು ಸಂಭಾಳಿಸಿಕೊಂಡು, ಆಶೆ ಆಕಾಂಕ್ಷೆಗಳನ್ನು ಬದಿಗೊತ್ತಿ ಜೀವನ ಸಾಗಿಸಿದರು ಎಂದು ಆಶ್ಚರ್ಯವಾಗುತ್ತದೆ.

ಅಮ್ಮ ದಯನೀಯವಾಗಿ ನನ್ನೆಡೆ ಮತ್ತೆ ಕಣ್ಣು ಹಾಯಿಸಿದರು. ನಿಧಾನವಾಗಿ 'ಹುಡ್ಗ ಗಿಡಗಾ ಇದ್ರೆ ಹೇಳೇ. ನಾಳೆ ನಂಗೆ ಅಪ್ಪಂಗೆ ಬೇಜಾರಾಗಾಂಗೆ ಮಾಡ್ಡ. ಹಿಂದೂ ಜಾತಿಯವನಾದ್ರೆ ಮದ್ವೆ ಮಾಡ್ತಾ' ಅಂದರು. ಅಷ್ಟರಲ್ಲಿ ಅಜ್ಜಿ 'ಸುಮ್ನೆ ಬಿಡೆ ಅದ್ನ. ಮೊದ್ಲೇ ಸಣ್ಣ ಭಯ ಇರ್ತು. ನೀನು ಬೇರೆ ಅದ್ರ ತಲೆ ತಿಂತಾ ಇದ್ದೆ.' ಅಂದು ನಯವಾಗಿ ಗದರಿದರು. ಗಿರಿಜಕ್ಕ ಢರ್ ಎಂದು ತೇಗುತ್ತಾ 'ಎಲ್ಲಾ ಹೋಗಿ ಬೆಂಗ್ಳೂರು, ಪರದೇಶ ಸೇರ್ಕಂಡ್ಯ. ಅದ್ರ ಶೋಕಿ ಆಡಂಬರ ಒಣ ಪ್ರತಿಷ್ಠೆ ಎಲ್ಲಾರ ತಲೆಗೇರಿದ್ದು. ತಂಗೋ ಹೇಳ್ದಾಂಗೆ ಆಗವು. ಇಲ್ಲಾಂದ್ರೆ ತಂಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತು. ತಂಗೊ ಯಾರ ಹಂಗಲ್ಲೂ ಇಪ್ಪೋವಲ್ಲ. ನಂಗಳ ದಾರಿ ನಂಗೋಕ್ಕೆ ಹೇಳಿ ನಡ್ಕತ್ತಾ ಇದ್ದೋ' ಅಂದು ನಿಟ್ಟುಸಿರು ಬಿಟ್ಟರು.
ಕೆಲವೊಂದು ನಿದರ್ಶನಗಳನ್ನೆಲ್ಲಾ ನೋಡಿದರೆ ಅವರ ಮಾತು ಅಕ್ಷರಷಃ ಸತ್ಯವೆನಿಸುತ್ತದೆ. ಕೆಲವೊಮ್ಮೆ ನಿರೀಕ್ಷೆಗಳು ಹೆಚ್ಚಾಗಿ ಗಂಡು ಹೆಣ್ಣು ಒಬ್ಬರಿಗ್ಗೊಬ್ಬರು ಹೊಂದಿಕೊಳ್ಳುವುದು ದುಸ್ತರವಾಗುತ್ತಿದೆ. ಮುಂದಿನ ದಿನಗಳ ಬಗ್ಗೆ ಆಲೋಚಿಸಿ ಒಂದು ಹೆಜ್ಜೆ ಹಿಂದೆ ಮುಂದೆ ನಡೆದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು ಅನ್ನಿಸುತ್ತದೆ.

ಆಗ ಮಾಲತತ್ತೆ 'ನಿಂಗಳ ಆದರ್ಶ ಸಿಂಗಾಪೂರದಲ್ಲಿ ಇದ್ರೂ ಒಂದು ಚೂರು ಘಮಂಡ್ ಇಲ್ಲ್ಯೆ . ಪಾಪದಂವ' ಎಂದು ಹೊಗಳಿದರೆ 'ನಿನ್ ಮಕ್ಕೋನು ಚೆನ್ನಾಗಿ ಸಂಸಾರ ಮಾಡ್ತಾ ಇದ್ದ ಬಿಡು. ಈಗಿನ ಕಾಲದ ಮಕ್ಕೋಕ್ಕೆ ಅಪ್ಪ ಅಮ್ಮ ಕುಂಡೆ ಹರ್ದು ದುಡ್ಡು ಮಾಡಿಟ್ಟದ್ದು ಬೇಡ. ಎಂತಕ್ಕೆ ಹಚ್ಕಳವು ಹೇಳಿ. ಅಂತಾದ್ರಲ್ಲಿ ನಿನ್ನ ಆಸ್ಟ್ರೇಲಿಯಾಕ್ಕೆ ಕರ್ಸ್ಕಂಡು ಎಲ್ಲಾ ಮಾಡಿದ್ನಲೇ ಗಣೇಶ' ಅಂದು ಗಿರಿಜಕ್ಕ ದ್ರಷ್ಟಿ ನಿವಾಳಿಸಿದರು.
ಇದು ಗೊಂದಲಕ್ಕೆ ಬೀಳುವ ಮಾತು. ಮಕ್ಕಳಿಗೆ ತಂದೆ ತಾಯಿ ತಮ್ಮಲ್ಲಿಗೆ ಬಂದರೆ ತಮ್ಮ ಕಷ್ಟ ತಪ್ಪುತ್ತದೆ ಎಂದೋ ಅಥವಾ ಇವರಿಗೆ ತಾನೂ ಹೊರದೇಶಕ್ಕೆ ಹೋಗಿ ಬಂದೆ ಎಂಬ ಹಮ್ಮುಬಿಮ್ಮೋ ಅಥವಾ ಹೋಗಲಾರದವರಿಗೆ ಎಲ್ಲಾರೂ ಪರದೇಶಕ್ಕೆ ಹೋಗುತ್ತಾರೆ ಎಂಬ ಸಣ್ಣ ಮಾತ್ಸರ್ಯವೋ ಗೊತ್ತಾಗುವುದಿಲ್ಲ.

ಅಮ್ಮ ಮಗದೊಮ್ಮೆ 'ನಂಗೇನೋ ಹೆದರಿಕೆ ಆಗ್ತಾ ಇದ್ದಪ್ಪಾ. ಆಗ್ಲಿಂದಲೂ ಕೇಳ್ತಾನೇ ಇದ್ದೆ. ರಂಜನಾ ಒಂದು ಚೂರು ತುಟಿಪಿಟಕ್ಕೆಂಜಾ ನೋಡು. ನಾಳೆ ಹುಡುಗ ಅದ್ನ ನೋಡುಲೆ ಬಪ್ಪಂವ. ಎಲ್ಲಾ ಒಪ್ಗೆ ಆದ್ರೆ ಸಾಕು. ಇದ್ಕು ಇಪ್ಪತ್ತೊಂಬತ್ತು ಆತು. ಆಟ ಅಲ್ಲ ಹೆಣ್ಮಕ್ಕಳ್ಳನ ಮನೇಲಿ ಮದೀ ಮಾಡ್ದೆ ಇಟಕಂಬುದು' ಎಂದು ದಗ್ಧರಾದರು.

ಗಿರಿಜಕ್ಕ 'ಹೌದಲೇ ನಾರಾಯಣ ಭಟ್ರ ಕಡೆಯವು ನಾಳೆ ಬೆಳಗ್ಗೆ ಬತ್ತೋ ಅಲ್ದಾ ನಮ್ ರಂಜು ನೋಡುಲೆ. ಹುಡುಗನ ಜಾತಕ ಗೀತಕ ಸರಿ ನೋಡಿಸಿರಲೇ. ಛಲೋ ಪಗಾರಿದ್ದ, ಮನೆ ಇದ್ದ, ಲೋನು ಎಂತಾದ್ರೂ ಇದ್ದ ಹೇಳಿ ಸುತ್ತಮುತ್ತ ವಿಚಾರಸಕಳಕ್ಕಾಗಿತ್ತು' ಅಂದು ಇನ್ನೊಂದು ಚೂರು ಭಯಪಡಿಸಿದರು. ಅಜ್ಜಿ 'ಎಷ್ಟು ಸಲ ಹೇಳ್ತ್ಯೇ. ಎಲ್ಲಾ ತಿಳಕಂಡು ಆಜು' ಹೇಳಿ ಅವರ ಬಾಯಿ ಮುಚ್ಚಿಸಿದರು. ಗಿರಿಜಕ್ಕ ಅದನ್ನ ತಾಗಿಸಿಕೊಳ್ಳದೆ 'ಸರಿ ನಾ ಹೊಂಟೇ. ತುಂಬಾ ಹೊತ್ತಾತು ಬೈಂದು' ಎಂದು ಎದ್ದು ಅಂಗಳಕ್ಕೆ ಬಂದು ಮತ್ತೆ ನಿಂತರು.
ಇಂಥಾ 'ಗಂಡು ನೋಡುವ ವೇಳೆ'ಯಲ್ಲಿ ಬಿಟ್ಟಿ ಉಪದೇಶಕೊಡುವವರು ತುಂಬಾ ಜನ ಸಿಗುತ್ತಾರೆ. ತಾವು ಜೀವನದಲ್ಲಿ ಅರೆದು ಕುಡಿದ ಸಿಹಿಕಹಿಗಳನ್ನೆಲ್ಲಾ ನಮಗೆ ಉಣಿಸಿ ಬಿಡುತ್ತಾರೆ. ಅಲ್ಲಿಯವರೆಗೆ ತಾವು ಆಡಿಕೊಂಡ ಮಾತುಗಳನ್ನ ಮರೆತು ವಿರೋಧಾಭಾಸ ತೋರಿ ಬಿಡುತ್ತಾರೆ.

ನಾವೆಲ್ಲಾ ಗಿರಿಜಕ್ಕನ ಅಂಗಳದಲ್ಲಿ ಕಳಿಸಲು ನಿಂತವರು, ಅವರು'ನಾಳೆ ತಿಂಡಿಗೆ ಅವಲಕ್ಕಿ ಶಿರಾನನೆ. ಸೀರೆ ಉಡುಸುಲೆ ಲಗೂನೆ ಬತ್ತೆ ಅಕ್ಕಾ' ಎಂದು ಹೇಳುವುದನ್ನ ಕೇಳಿ ಹ್ಞೂಗುಟ್ಟಿದೆವು. 'ಮದ್ವೆ ಆದ್ ಕೂಡ್ಲೆ ಮಕ್ಕೊ ಮಾಡ್ಕಳಿ. ಅಲ್ಲಿ ಇಲ್ಲಿ, ಇಡೀ ಜಗತ್ತೇ ಸುತ್ತದೋ. ಇನ್ನು ಸೆಟ್ಲ್ ಆಗುಲೆ ಟೈಮ್ ಬೇಕು. ಫ್ಯಾಮಿಲಿ ಪ್ಲಾನಿಂಗ್ ಮಾಡ್ತಾ ಇದ್ದೋ ಹೇಳಿ ಕಾಲ ಹರಣ ಮಾಡಡಿ' ಎಂದು ನನ್ನ ಮೈ ತಟ್ಟಿದರು.

ಅವರು ಆಕಡೆ ಹೋದಂತೆ ಅಜ್ಜಿ 'ರಂಜನಾ ನೀ ರಾಶ್ಶಿ ತಲೆ ಕೆಡಸ್ಕಳದ್ದೆ ಇರೆ. ಹೇಂಗೂ ಅನಿರುದ್ಧನ ಬೆಂಗಳೂರಲ್ಲಿ ನೋಡಿದ್ದೆ. ಮಾತಾಡ್ಸಿದ್ದೆ. ಒಬ್ರಿಗೊಬ್ರಿಗೆ ಇಷ್ಟ ಆಜಲೇ. ನಾಳೆದು ಹೇಂಗಿದ್ರು ಬರೇ ಕಾಟಾಚಾರಕ್ಕೆ. ಮದ್ವೆ ದಿನಾಂಕ ಗೊತ್ತು ಮಾಡ್ಸಕಂಬುಲೆ' ಅನ್ನುತ್ತಾ 'ಈ ಜಟ್ಟಂಗೆ ಒಂದಿಪ್ಪತ್ತು ಎಳನೀರು ಇಳ್ಸು ಹೇಳಿದಿದೆ. ನಾಳೆ ಅವ್ಕೋ ಕುಡಿಯೋದಿದ್ರೆ ಹೇಳಿ. ಎಲ್ಲಿ ಹೋಗಿ ಸತ್ತ್ ಜ್ನನಾ' ಎಂದು ಬಯ್ಯುತ್ತಾ ಮನೆ ಒಳಗಡೆ ಹೋದರು. ಅಮ್ಮ ಬಿಚ್ಚಿಟ್ಟ ಶೇಂಗಾ ಕಾಳುಗಳನ್ನ ಡಬ್ಬಿಯಲ್ಲಿ ತುಂಬುತ್ತಾ 'ಕಡೀಗೆ ಬತ್ತ ಮಜ್ಗಿ ಬೆಲ್ಲ ಕುಡಿಯುಲೆ...ನಾ ಹೇಳ್ತೆ. ಅತ್ಗೆ ಒಂದು ಚೂರು ರವೆ ಚೊಕ್ಕ ಮಾಡಿಕೊಡೆ' ಎಂದು ಹೇಳಿ ಮಾಲತತ್ತೆಯನ್ನು ಅಡಿಗೆ ಮನೆ ಕಡೆ ಕರೆದುಕೊಂಡು ಹೋದರು.

ಅಷ್ಟರಲ್ಲಿ ಸಂಜೆಗೆಂಪರೀ ಅಡಿಕೆ ತೋಟ ಹೊನ್ನಿನ ತೇರಿನಂತೆ ಕಾಣಿಸುತ್ತಿತ್ತು. ಅಲ್ಲಿನ ಮರಗಳಿಗೆ ಸ್ಪ್ರಿಂಕ್ಲರ್ ನಿಂದ ಬಿಟ್ಟ ನೀರು ಪನ್ನೀರ ಅಭಿಷೇಕ ಮಾಡಿದಂತೆ ತೋರುತಿತ್ತು. ಪಕ್ಕದ ಮನೆ ಗೌರಿ ಅಂಬಾ ಎಂದು ರಾಗವಾಗಿ ಹಾಡುತಿದ್ದಳು. ಅಪ್ಪ ಮಾವ ಇನ್ನೂ ಮನೆ ಕಡೆ ಬಂದಿರಲಿಲ್ಲ.
ನಾನೊಬ್ಬಳೇ ಹಜಾರದ ಕಂಬಕ್ಕೆ ಸಾಚಿ ಕುಳಿತು ಎದೆಯಲೊಂದು ತರಹದ ಅವ್ಯಕ್ತ ಖುಷಿ ಭಯ ತುಂಬಿದ ಭಾವನೆಗಳನ್ನು ಅದುಮಿಕ್ಕುತ್ತ ನಾಳಿನ ಬರವು ಮಾಡಿಕೊಳ್ಳಲು ಸಿದ್ಧತೆ ಮಾಡಹತ್ತಿದೆ.

- ಶಿಲ್ಪ ಶಾಸ್ತ್ರಿ

No comments:

Post a Comment